ಬೆಂಗಳೂರು: ಬೆಂಗಳೂರು ಮಹಿಳೆಯರ ನಿದ್ದೆಗೆಡಿಸಿದ್ದ ಕುಖ್ಯಾತ ಸರಗಳ್ಳ ಸೊಹೇಲ್ ಪಾಷಾ ಎಂಬಾತನನ್ನು ದಕ್ಷಿಣ ವಿಭಾಗದ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ.
ಈ ಹಿಂದೆ ಇದೇ ಸರಗಳ್ಳತನ ಮಾಡಿದ ಆರೋಪದ ಮೇರೆಗೆ ಜೈಲಿಗೆ ಹೋಗಿ ಬಿಡುಗಡೆಯಾಗಿ ಬಂದ ನಂತರವೂ ಹೆಚ್ಚಿನ ಹಣ ಗಳಿಸುವ ಆಸೆಯಿಂದ ಸಹಚರನ ಜೊತೆ ಸೇರಿ ಸರಗಳವು ಮಾಡುತ್ತಿದ್ದ ಸೊಹೇಲ್ ಪಾಷನನ್ನು ದಕ್ಷಿಣ ವಿಭಾಗದ ಪೊಲೀಸರು ಬಂಧಿಸಿದ್ದಾರೆ. ಕಲ್ಕೆರೆಯ ಎನ್ಆರ್‌ಐ ಲೇಔಟ್‌ನ ಸೊಹೇಲ್ ಪಾಷ (23 ವರ್ಷ) ಎಂಬಾತನನ್ನು ಬಂಧಿಸಿ ಆತನಿಂದ ಸುಮಾರು 10 ಲಕ್ಷ 9 ಸಾವಿರ ಮೌಲ್ಯದ 326 ಗ್ರಾಂ ತೂಕದ 9 ಚಿನ್ನದ ಸರಗಳು ಹಾಗೂ ಒಂದು ಅಪಾಚೆ ಬೈಕ್‌ನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಇನ್ನು ಸೊಹೇಲ್ ನೊಂದಿಗೆ ಮೂರು ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಆತನ ಸಹಚರ ಹೆಣ್ಣೂರಿನ ಇಮ್ರಾನ್ ಅಲಿಯಾಸ್ ಬಚನ್ ತಲೆಮರೆಸಿಕೊಂಡಿದ್ದು, ಆತನ ಬಂಧನಕ್ಕಾಗಿ ಪೊಲೀಸರು ತೀವ್ರ ಶೋಧ ನಡೆಸಿದ್ದಾರೆ.
ಆರೋಪಿಯು ರಾಮಮೂರ್ತಿ ನಗರ, ನಂದಗುಡಿ, ಹೆಣ್ಣೂರು, ಬಾಣಸವಾಡಿ ಹಾಗೂ ಮೈಸೂರಿನ ಎನ್‌ಆರ್ ನಗರಗಳಲ್ಲಿ ಸರಗಳ್ಳತನ, ಮೊಬೈಲ್ ಕಳವು ಪ್ರಕರಣದಲ್ಲಿ ಭಾಗಿಯಾಗಿ ಜೈಲಿಗೆ ಹೋಗಿ ಬಂದಿದ್ದ. ಅಲ್ಲಿಂದ ಜಾಮೀನಿನ ಮೇಲೆ ಬಿಡುಗಡೆಯಾಗಿ ಬಂದ ನಂತರ ರಾಮಮೂರ್ತಿನಗರದಲ್ಲಿ ಆಟೋ ಚಾಲಕನಾಗಿ ಕೆಲಸ ಮಾಡಿಕೊಂಡಿದ್ದ. ಆಟೋ ಓಡಿಸುವುದರಲ್ಲಿ ಹೆಚ್ಚಿನ ಹಣ ಗಳಿಸಲು ಸಾಧ್ಯವಾಗದೆ ಸಹಚರ ಇಮ್ರಾನ್ ಅಲಿಯಾಸ್ ಬಚ್ಚನ್ ಜೊತೆ ಸೇರಿ ಮತ್ತೆ ಸರಗಳ್ಳತನ ಕೃತ್ಯಕ್ಕಿಳಿದಿದ್ದ. ಒಂಟಿ ಮಹಿಳೆಯರನ್ನು ಗುರಿಯಾಗಿಸಿಕೊಂಡು ಅಪಾಚೆ ಬೈಕ್‌ನಲ್ಲಿ ಸುತ್ತಾಡುತ್ತ ಸರಗಳವು ಮಾಡುತ್ತಿದ್ದ ಎಂದು ಡಿಸಿಪಿ ಡಾ. ಎಸ್.ಡಿ. ಶರಣಪ್ಪ ತಿಳಿಸಿದ್ದಾರೆ.
ಜಯನಗರ ಉಪವಿಭಾಗದಲ್ಲಿ ನಡೆಯುತ್ತಿದ್ದ ಸರಗಳವು ಕೃತ್ಯಗಳನ್ನು ಪತ್ತೆ ಹಚ್ಚಲು ರಚಿಸಲಾಗಿದ್ದ ಎಸಿಪಿ ಎಸ್. ಶ್ರೀನಿವಾಸ್ ನೇತೃತ್ವದ ಜೆಪಿ ನಗರ ಇನ್ಸ್‌ಪೆಕ್ಟರ್ ಹಿತೇಂದ್ರ ಅವರನ್ನೊಳಗೊಂಡ ವಿಶೇಷ ತಂಡವು ಜೆಪಿ ನಗರದ ವಿವಿಟಿ ಕಾಲೇಜ್ ಬಳಿ ಕಳೆದ ಜನವರಿಯಲ್ಲಿ ನಡೆದಿದ್ದ ಸುಂದರಿ ಎಂಬ ಮಹಿಳೆಯ ಸರಗಳ್ಳತನದ ಜಾಡು ಹಿಡಿದು ಸ್ಥಳದಲ್ಲಿ ದೊರೆತ ಸಿಸಿಟಿವಿ ಕ್ಯಾಮರಾ ದೃಶ್ಯಾವಳಿಗಳನ್ನಾಧರಿಸಿ ಸೊಹೇಲ್‌ನನ್ನು ಬಂಧಿಸಿದ್ದಾರೆ. ಆತನ ಸಹಚರ ಬಚನ್ ಗ್ಯಾರೇಜ್‌ನಲ್ಲಿ ಕೆಲಸ ಮಾಡುತ್ತಿದ್ದು, ಈತನೊಂದಿಗೆ ಮೂರು ಸರಗಳ್ಳತನದಲ್ಲಿ ಭಾಗಿಯಾಗಿರುವುದು ವಿಚಾರಣೆಯಲ್ಲಿ ತಿಳಿದುಬಂದಿದೆ. ಸೊಹೇಲ್ ಬಂಧನದಿಂದ ಜೆಪಿನಗರ, ಬನಶಂಕರಿ ತಲಾ 2, ಜಯನಗರ, ಕೆಎಸ್ ಲೇಔಟ್, ಗಿರಿನಗರ ಠಾಣೆಯ ತಲಾ 1 ಸೇರಿದಂತೆ 7 ಅಪರಾಧ ಪ್ರಕರಣಗಳು ಪತ್ತೆಯಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics