ಚಿಕ್ಕಬಳ್ಳಾಪುರ: ಕರ್ನಾಟಕ ವಿಧಾನಸಭೆ ಚುನಾವಣೆಗೆ ಇನ್ನು ಕೆಲವೇ ದಿನ ಬಾಕಿ ಇರುವಂತೆ ರಾಜಕೀಯ ಪಕ್ಷಗಳ ಕಾರ್ಯಕರ್ತರ ನಡುವಿನ ಜಗಳ ತಾರಕಕ್ಕೇರಿದ್ದು, ಚಿಕ್ಕಬಳ್ಳಾಪುರದಲ್ಲಿ ನಡೆದ ಕಾಂಗ್ರೆಸ್-ಜೆಡಿಎಸ್ ಕಾರ್ಯಕರ್ತರ ನಡುವಿನ ಘರ್ಷಣೆಯಲ್ಲಿ ಓರ್ವ ವ್ಯಕ್ತಿ ಬಲಿಯಾಗಿದ್ದಾನೆ.
ಚಿಕ್ಕಬಳ್ಳಾಪುರ ಜಿಲ್ಲೆ ಗೌರಿಬಿದನೂರು ತಾಲೂಕು ಹಳೇ ಉಪ್ಪಾರಹಳ್ಳಿಯಲ್ಲಿ ಈ ಘಟನೆ ನಡೆದಿದ್ದು, ನಿನ್ನೆ ರಾತ್ರಿ ಗ್ರಾಮದಲ್ಲಿ ಸಂಭವಿಸಿದ ಗುಂಪು ಘರ್ಷಣೆಯಲ್ಲಿ ಜೆಡಿಎಸ್ ಕಾರ್ಯಕರ್ತ ರಾಮರೆಡ್ಡಿ ಎಂಬುವವರ ಹತ್ಯೆಯಾಗಿದೆ. ಅಂತೆಯೇ ಘಟನೆಯಲ್ಲಿ ನರೇಂದ್ರ ರೆಡ್ಡಿ ಎಂಬುವವರು ಗಾಯಗೊಂಡಿದ್ದಾರೆ. ಗಾಯಾಳುವನ್ನು ಬೆಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ.
ಮೂಲಗಳ ಪ್ರಕಾರ ಹಳೇ ವೈಷಮ್ಯದ ಹಿನ್ನಲೆಯಲ್ಲಿ ಗೌರಿಬಿದನೂರು ತಾಲೂಕಿನ ಕೋಟಾಲದಿನ್ನೆಯ ಬಾರ್ ಎದುರುಗಡೆ ನಿಂತಿದ್ದ ರಾಮರೆಡ್ಡಿ ಮತ್ತು ನರೇಂದ್ರ ರೆಡ್ಡಿ ಮೇಲೆ ರಮೇಶ್ ಎಂಬಾತನ ತಂಡ ಮಾರಕಾಸ್ತ್ರಗಳಿಂದ ದಾಳಿ ಮಾಡಿ ಪರಾರಿಯಾಗಿದೆ. ಪರಸ್ಪರರ ಮೇಲಿನ ದಾಳಿಯಲ್ಲಿ ರಾಮರೆಡ್ಡಿ ಮತ್ತು ನರೇಂದ್ರ ರೆಡ್ಡಿ ಗಾಯಗೊಂಡಿದ್ದು, ನರೇಂದ್ರ ರೆಡ್ಡಿಗೆ ಚಾಕುವಿನಿಂದ ಇರಿಯಲಾಗಿದೆ. ಈ ಪೈಕಿ ರಾಮರೆಡ್ಡಿ ಪರಿಸ್ಥಿತಿ ಗಂಭೀರವಾಗಿದ್ದು, ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಮಾರ್ಗ ಮಧ್ಯೆ ಆತ ಸಾವನ್ನಪ್ಪಿದ್ದಾರೆ. ಇನ್ನು ಚಾಕು ಇರಿತದಿಂದ ಗಾಯಗೊಂಡಿರುವ ನರೇಂದ್ರ ರೆಡ್ಡಿಯನ್ನು ಕೊಲಂಬಿಯಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.
ಹಸೆ ಮಣೆ ಏರಬೇಕಿದ್ದ ವರ, ಮಸಣ ಸೇರಿದ
ಇನ್ನು ಹತ್ಯೆಗೀಡಾಗಿರುವ ರಾಮರೆಡ್ಡಿ ಇನ್ನೊಂದು ವಾರದಲ್ಲಿ ಹಸೆಮಣೆ ಏರಬೇಕಿತ್ತಂತೆ. ಮುಂದಿನ ವಾರ ಆತನ ಮದುವೆ ನಿಶ್ಚಯವಾಗಿತ್ತು. ಆದರೆ ಅಷ್ಟರಲ್ಲಾಗಲೇ ನಡೆದ ಘರ್ಷಣೆಯಲ್ಲಿ ಆತ ಸಾವನ್ನಪ್ಪಿದ್ದಾನೆ. ಪ್ರಸ್ತುತ ಪ್ರಕರಣ ದಾಖಲಿಸಿಕೊಂಡಿರುವ ಗೌರಿ ಬಿದನೂರು ಪೊಲೀಸರು ಆರೋಪಿ ರಮೇಶ್ ನನ್ನು ಬಂಧಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics