ಬೆಂಗಳೂರು: ಏ.28 ರಿಂದ ಅನಿರ್ದಿಷ್ಟಾವಧಿ ಮುಷ್ಕರ ನಡೆಸುವುದಾಗಿ ಬಿಎಂಆರ್ ಸಿಎಲ್ ಗೆ ನಮ್ಮ ಮೆಟ್ರೋ ನೌಕರರ ಸಂಘ ನೋಟಿಸ್ ಕಳಿಸಿದೆ.
ವಿಶ್ವಸನೀಯ ಮೂಲಗಳ ಪ್ರಕಾರ ಬಿಎಂಆರ್ ಸಿಎಲ್ ಗೆ ಮುಷ್ಕರದ ನೋಟಿಸ್ ತಲುಪಿದ್ದು, ಯೂನಿಯನ್ ನ ಪ್ರಧಾನ ಕಾರ್ಯದರ್ಶಿ ಟಿಆರ್ ಉದಯ ಅವರ ಸಹಿ ಇದೆ. ಏ.23 ರಂದು ಬೇಡಿಕೆಗಳ ಪಟ್ಟಿ ಇರುವ ಪತ್ರಕ್ಕೆ ಸರಿಯಾಗಿ ಸ್ಪಂದಿಸಿಲ್ಲ. ಈ ಹಿನ್ನೆಲೆಯಲ್ಲಿ ನೌಕರರ ಸಂಘಟನೆ ಅನಿರ್ದಿಷ್ಟಾವಧಿ ಮುಷ್ಕರ ನಡೆಸಲು ತೀರ್ಮಾನಿಸಿದೆ ಎಂದು ನೋಟಿಸ್ ನಲ್ಲಿ ತಿಳಿಸಲಾಗಿದೆ. ಮೆಟ್ರೋ ರೈಲು ಸೋಮವಾರದಿಂದ ಬೆಳಿಗ್ಗೆ 5 ರಿಂದ ರಾತ್ರಿ 11 ಗಂಟೆಯ ವರೆಗೆ ಸಂಚರಿಸಲಿದ್ದು ಭಾನುವಾರ ಬೆಳಿಗ್ಗೆ 8 ರಿಂದ ಕಾರ್ಯಾರಂಭ ಮಾಡಲಿವೆ.
ಮುಷ್ಕರವನ್ನು ಎದುರಿಸಲು ಮೆಟ್ರೋ ಹಿರಿಯ ಅಧಿಕಾರಿಗಳು ಎಲ್ಲಾ ರೀತಿಯ ಕಾನೂನು ಆಯ್ಕೆಗಳನ್ನು ಪರಿಗಣಿಸುತ್ತಿದ್ದಾರೆ. ಪರಿಸ್ಥಿತಿಯನ್ನು ನಿಭಾಯಿಸಲು ತುರ್ತು ಪ್ರತಿಕ್ರಿಯೆ ದಳ ಹಾಗೂ ಮೆಟ್ರೋ ಸಿಬ್ಬಂದಿಗಳಿಗೆ ಸಿದ್ಧವಿರುವಂತೆ ಸೂಚನೆ ನೀಡಲಾಗಿದೆ.