ಬೆಂಗಳೂರು: ವಿರಳಾತಿ ವಿರಳ ದೇಶದಲ್ಲಿಯೇ ಮೊದಲು ಎಂದು ಹೇಳಲಾಗುತ್ತಿರುವ 'ಪಿಪಿ' ಅಥವಾ ಪಿ ನಲ್ ರಕ್ತದ ಗುಂಪಿನ ಮಾದರಿಯನ್ನು ಮಣಿಪಾಲ ಆಸ್ಪತ್ರೆಯ ವೈದ್ಯರು ಪತ್ತೆ ಹಚ್ಚಿದ್ದು, ಮೂಳೆ ಮುರಿತದಿಂದಾಗಿ ಆಸ್ಪತ್ರೆಗೆ ದಾಖಲಾಗಿರುವ ವ್ಯಕ್ತಿಗೆ ವೈದ್ಯರು ರಕ್ತರಹಿತ ಶಸ್ತ್ರಚಿಕಿತ್ಸೆ ನಡೆಸಿದ್ದಾರೆಂದು ತಿಳಿದುಬಂದಿದೆ.
ಎಲುಬು ಮುರಿತವಾಗಿರುವ ಹಿನ್ನಲೆಯಲ್ಲಿ ಮೇ.11 ರಂದು ವ್ಯಕ್ತಿ ಆಸ್ಪತ್ರೆಗೆ ದಾಖಲಾಗಿದ್ದು, ವ್ಯಕ್ತಿಗೆ ಶಸ್ತ್ರಚಿಕಿತ್ಸೆ ನಡೆಸುವ ಅಗತ್ಯವಿದೆ. ಶಸ್ತ್ರಚಿಕಿತ್ಸೆ ನಡೆಸಲು ರಕ್ತದ ಅಗತ್ಯವಿದೆ. ವಿರಳವಾಗಿರುವ ಈ ಮಾದರಿಯ ರಕ್ತವು ನಿಧಿಯಲ್ಲಿ ಲಭ್ಯವಿರಲಿಲ್ಲ. ಹೀಗಾಗಿ ಇತರೆ 80 ಘಟಕಗಳಲ್ಲಿ ತಪಾಸಣೆ ನಡೆಸಿದರೂ ನಿರ್ದಿಷ್ಟ ರಕ್ತದ ಮಾದರಿ ಯಾವ ರಕ್ತದೊಂದಿಗೂ ಹೊಂದಾಣಿಯಾಗಿಲ್ಲ. ಹೀಗಾಗಿ ವೈದ್ಯರು ರಕ್ತರಹಿತ ಶಸ್ತ್ರಚಿಕಿತ್ಸೆ ನಡೆಸಲಾಯಿತು ಎಂದು ವೈದ್ಯರು ಹೇಳಿದ್ದಾರೆ.
ಎ, ಬಿ, ಒ ಹಾಗೂ ಹೆಚ್ಆರ್'ಡಿ ಈಗ ರಕ್ತದ ಗುಂಪುಗಳಲ್ಲಿ ಸಾಮಾನ್ಯವಾಗಿರುವ ವರ್ಗೀಕರಣಗಳು. ಆದರೆ, ಸುಮಾರು 200ಕ್ಕೂ ಅಧಿಕ ಸಣ್ಣ ಸಣ್ಣ ರಕ್ತ ಗುಂಪುಗಳ ಪ್ರತಿಜನಕಗಳನ್ನು ಈಗಾಗಲೇ ಗುರುತಿಸಲಾಗಿದೆ. 1 ಸಾವಿರಕ್ಕಿಂತಲೂ ಕಡಿಮೆ ಜನರಲ್ಲಿ ಗುರುತಿಸಲಾಗುವ ವಿಶೇಷ ರಕ್ತದ ಗುಂಪನ್ನು ಅಪರೂಪದ ರಕ್ತ ಎಂದು ಕರೆಯಲಾಗುತ್ತದೆ.
ಪಿಪಿ ರಕ್ತದ ಮಾದರಿ ಪತ್ತೆಯಾಗುತ್ತಿರುವುದು ಇದೇ ಮೊದಲು. ವಿರಳ ರಕ್ತದ ಮಾದರಿಗಳನ್ನು ಸಂಗ್ರಹಿಸಲು ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ. ದಾನಿಗಳು ಸಿಗುವ ವಿಶ್ವಾಸವಿದೆ. ವ್ಯಕ್ತಿದ ರಕ್ತದ ಗುಂಪು ಜನಾಂಗೀಯತೆ ಹಾಗೂ ಅನುವಂಶಿಕ ಸ್ವಭಾವಗಳನ್ನು ಆಧರಿಸುತ್ತದೆ. ಸ್ಥಳದಿಂದ ಸ್ಥಳಕ್ಕೆ ಬದಲಾವಣೆಗಳೂ ಇರುತ್ತವೆ. ಯೂರೋಪ್ ನಲ್ಲಿ ಈ ಬಗ್ಗೆ ಅಧ್ಯಾಯನವೊಂದು ನಡೆದಿತ್ತು. 5.8 ಮಿಲಿಯನ್ ಜನರಲ್ಲಿ ಕೇವಲ ಒಬ್ಬ ವ್ಯಕ್ತಿಯಲ್ಲಿ ಮಾತ್ರ ಪಿಪಿ ರಕ್ತದ ಮಾದರಿ ಕಂಡು ಬಂದಿತ್ತು. ಸಮಯದ ಅಭಾವದಿಂದಾಗಿ ವಿದೇಶಗಳಿಂದ ರಕ್ತಗಳನ್ನು ಆಮದು ಮಾಡಿಕೊಳ್ಳುವುದು ಕಷ್ಟವಾಗುತ್ತದೆ. ತುರ್ತು ಸಮಯದಲ್ಲಿ, ನಾವು ನಮ್ಮದೇ ಆದ ರಾಷ್ಟ್ರೀಯ ನೊಂದಾವಣಿ ಮಾಡಿಕೊಳ್ಳಬೇಕಾಗುತ್ತದೆ ಎಂದು ಡಾ.ಶಮೀ ಶಾಸ್ತಿಯವರು ಹೇಳಿದ್ದಾರೆ.