ರಾಜ್ಯ

ಫ್ಲೆಕ್ಸ್ ತೆರವು ವೇಳೆ ಸಿಬ್ಬಂದಿ ಮೇಲೆ ಹಲ್ಲೆ: ನಗರ ಪೊಲೀಸ್ ಆಯುಕ್ತರಿಗೆ 'ಹೈ' ತರಾಟೆ

Lingaraj Badiger
ಬೆಂಗಳೂರು: ನಗರದಲ್ಲಿ ಫ್ಲೆಕ್ಸ್ ತೆರವು ಕಾರ್ಯಾಚರಣೆ ವೇಳೆ ಬಿಬಿಎಂಪಿ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ನಗರ ಪೊಲೀಸ್ ಆಯುಕ್ತರನ್ನು ಶುಕ್ರವಾರ ತರಾಟೆಗೆ ತೆಗೆದುಕೊಂಡಿದೆ.
ಘಟನೆಗೆ ಸಂಬಂಧಿಸಿದಂತೆ ನಗರ ಪೊಲೀಸ್ ಆಯುಕ್ತ ಟಿ. ಸುನೀಲ್ ಕುಮಾರ್ ಅವರನ್ನು ಕೋರ್ಟ್ ಗೆ ಕರೆಯಿಸಿಕೊಂಡ ಮುಖ್ಯ ನ್ಯಾಯಮೂರ್ತಿ ದಿನೇಶ್ ಮಾಹೇಶ್ವರಿ ಅವರು, ಹಲ್ಲೆ ನಡೆಸಿದವರ ವಿರುದ್ಧ ಪ್ರಕರಣ ದಾಖಲಿಸಿದ್ದೀರಾ ಎಂದು ಪ್ರಶ್ನಿಸಿದರು.
ಪ್ರಕರಣಕ್ಕೆ ಸಂಬಂಧಿಸಿದಂತೆ ಎಷ್ಟು ಆರೋಪಿಗಳನ್ನು ಬಂಧಿಸಿದ್ದೀರಿ? ಆರೋಪಿಗಳೇನಾದರೂ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದಾರೆಯೇ? ಎಂದು ಪ್ರಶ್ನಿಸಿದ ಮಾಹೇಶ್ವರಿ, ಹಲ್ಲೆ ನಡೆಸಿದವರ ವಿರುದ್ಧ ಸಮಾಜದಲ್ಲಿ ಶಾಂತಿ ಕದಡಿದ ಆರೋಪದಡಿ ಪ್ರಕರಣ ದಾಖಲಿಸುವಂತೆ ಪೊಲೀಸ್ ಆಯುಕ್ತರಿಗೆ ಸೂಚಿಸಿದರು.
ಯಾರಾದರೂ ಅಧಿಕಾರಿಗಳ ಮೈ ಮುಟ್ಟಿದರೆ ಅವರಿಗೆ ತಕ್ಕ ಶಾಸ್ತಿ ಮಾಡಲಾಗುವುದು ಎಂದು ಎಚ್ಚಿರಿಕೆ ನೀಡಿದ ಕೋರ್ಟ್, ಹಲ್ಲೆ ನಡೆಸಿದವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ತೆಗೆದುಕೊಳ್ಳಿ ಎಂದು ಆಯುಕ್ತರಿಗೆ ಸೂಚಿಸಿದೆ.
ಈ ಮಧ್ಯೆ, ನಿನ್ನೆ ಮಹದೇವಪುರ ವಲಯದ ಟಿನ್ ಫ್ಯಾಕ್ಟರಿ ಬಳಿ ಫ್ಲೆಕ್ಸ್ ಹಾಗೂ ಬ್ಯಾನರ್ ತೆರವು ಮಾಡುತ್ತಿದ್ದ ಬಿಬಿಎಂಪಿ ಸಿಬ್ಬಂದಿಯ ಮೇಲೆ ಹಲ್ಲೆ ನಡೆಸಿದ್ದ ನಾಲ್ವರನ್ನು ಪೊಲೀಸರು ಇಂದು ಬಂಧಿಸಿದ್ದಾರೆ.
ಟಿನ್ ಫ್ಯಾಕ್ಟರಿ ಸಮೀಪದ ಉದಯನಗರ ನಿವಾಸಿಗಳಾದ ರಾಜೇಂದ್ರ, ಸಿಮ್ಸನ್, ಕಮಲನಾಥ್, ಸೂರ್ಯ ಬಂಧಿತ ಆರೋಪಿಗಳು. 
ಹೈಕೋರ್ಟ್ ಆದೇಶದಿಂದ ಎಚ್ಚೆತ್ತುಕೊಂಡ ಬಿಬಿಎಂಪಿ ಆಯುಕ್ತರು, ಎಲ್ಲ ಸಿಬ್ಬಂದಿಗೆ ಅನಧಿಕೃತ ಬ್ಯಾನರ್ ಹಾಗೂ ಫ್ಲೆಕ್ಸ್ ತೆರವು ಮಾಡುವಂತೆ ಆದೇಶ ನೀಡಿದ್ದರು. ಹೀಗಾಗಿ ಗುರುವಾರವೂ ಬಿಬಿಎಂಪಿ ಸಿಬ್ಬಂದಿ ಫ್ಲೆಕ್ಸ್ ಹಾಗೂ ಬ್ಯಾನರ್ ತೆರವು ಕಾರ್ಯ ಮುಂದುವರಿಸಿದ್ದರು. ಟಿನ್ ಫ್ಯಾಕ್ಟರಿ ಬಳಿ ಹಾಕಲಾಗಿದ್ದ ಫ್ಲೆಕ್ಸ್ ಹಾಗೂ ಬ್ಯಾನರ್‍ಗಳನ್ನು ತೆಗೆಯುತ್ತಿದ್ದಾಗ ಆರೋಪಿಗಳು ಆಕ್ಷೇಪ ವ್ಯಕ್ತಪಡಿಸಿದ್ದರು. ಈ ವೇಳೆ ಹೆಚ್.ಎ.ಎಲ್ ಸಹಾಯಕ ಕಂದಾಯ ಅಧಿಕಾರಿ ಭಟ್ಟಾಚಾರ್ಯ ಅವರ ಮೇಲೆ ಹಲ್ಲೆ ಮಾಡಿ, ಆರೋಪಿಗಳು ಪರಾರಿಯಾಗಿದ್ದರು.
SCROLL FOR NEXT