ರಾಜ್ಯ

ಸಿಎಂ ಗದ್ದುಗೆ ಏರಿ 75 ದಿನ: 8 ಜಿಲ್ಲೆ, 25 ದೇಗುಲಗಳಿಗೆ ಭೇಟಿ ನೀಡಿದ್ದ ಹೆಚ್.ಡಿ.ಕುಮಾರಸ್ವಾಮಿ

Manjula VN
ಬೆಂಗಳೂರು: ದೇಶದಾದ್ಯಂತ ತೀವ್ರ ಕುತೂಹಲ ಕೆರಳಿಸಿದ್ದ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್-ಕಾಂಗ್ರೆಸ್ ಮೈತ್ರಿಯಿಂದಾಗಿ ಅಚ್ಚರಿ ಎಂಬಂತೆ ಮುಖ್ಯಮಂತ್ರಿ ಸ್ಥಾನಕ್ಕೇರಿದ್ದ ಹೆಚ್.ಡಿ.ಕುಮಾರಸ್ವಾಮಿಯವರು ಅಧಿಕಾರಕ್ಕೆ ಬಂದು 75 ದಿನಗಳಾಗಿದ್ದು, ಅಧಿಕಾರಕ್ಕೆ ಬಂದಾಗಿನಿಂದ ಈ ವರೆಗೂ ಹಳೇ ಮೈಸೂರಿನ 8 ಜಿಲ್ಲೆಗಳು ಹಾಗೂ ದಕ್ಷಿಣ ಭಾರತದ 25 ದೇಗುಲಗಳಿಗೆ ಭೇಟಿ ನೀಡಿದ್ದಾರೆ. 
ಮುಖ್ಯಮಂತ್ರಿ ಸ್ಥಾನಕ್ಕೇರಿದ ಬಳಿಕ ಕರ್ನಾಟಕ ಹಾಗೂ ರಾಜ್ಯ ಹೊರಗಿನ ಹಲವು ದೇಗುಲಗಳಿಗೆ ಭೇಟಿ ನೀಡಿರುವ ಕುಮಾರಸ್ವಾಮಿಯವರು ಉತ್ತರ ಕರ್ನಾಟಕದ ಒಂದೂ ದೇಗುಲಕ್ಕೂ ಈ ವರೆಗೂ ಭೇಟಿ ನೀಡಿಲ್ಲ. 
ಬಹುಮತ ಸಾಬೀತುಪಡಿಸುವಲ್ಲಿ ರಾಜ್ಯ ಬಿಜೆಪಿ ವಿಫಲವಾದ ಹಿನ್ನಲೆಯಲ್ಲಿ ಜೆಡಿಎಸ್ ಹಾಗೂ ಕಾಂಗ್ರೆಸ್ ಮೈತ್ರಿಯಿಂದಾಗಿ ಕುಮಾರಸ್ವಾಮಿಯವರನ್ನು ಮುಖ್ಯಮಂತ್ರಿಯಾಗಿ  ಮೇ.19 ಅಧಿಕಾರ ಸ್ವೀಕಾರ ಮಾಡುವಂತೆ ರಾಜ್ಯಪಾಲ ವಜುಭಾಯಿ ವಾಲಾ ಅವರು ಆಹ್ವಾನ ನೀಡಿದ್ದರು. ರಾಜ್ಯಪಾಲರು ಆಹ್ವಾನ ನೀಡುತ್ತಿದ್ದಂತೆಯೇ ಕುಮಾರಸ್ವಾಮಿಯವರು ದೇಗುಲಗಳಷ್ಟೇ ಅಲ್ಲದೆ, ಹಳೇ ಮೈಸೂರು, ರಾಮನಗರ, ಮಂಡ್ಯ, ಕೊಡಲು, ಬೆಂಗಳೂರು ಹಾಗೂ ಚಿಕ್ಕಮಗಳೂರು ಜಿಲ್ಲೆಗಳ ಮಸೀದಿ, ಚರ್ಚ್'ಗಳಿಗೂ ಭೇಟಿ ನೀಡಿದ್ದರು. ಇದಲ್ಲದೆ ಹೊರ ರಾಜ್ಯಗಳಾದ ತಮಿಳುನಾಡು ಹಾಗೂ ಆಂಧ್ರಪ್ರದೇಶದ ದೇಗುಲಗಳಿಗೂ ಭೇಟಿ ನೀಡಿದ್ದರು. 
ಅಧಿಕಾರಕ್ಕೆ ಬಂದ 75 ದಿನಗಳಲ್ಲಿ ಮೂರು ದಿನಗಳಿಗೊಮ್ಮೆ ಒಂದು ದೇಗುಲಕ್ಕಾದರೂ ಕುಮಾರಸ್ವಾಮಿಯವರು ಭೇಟಿ ನೀಡುತ್ತಿದ್ದಾರೆ. ಕೇವಲ ದೇಗುಲಗಳಷ್ಟೇ ಅಲ್ಲದೆ, ತುಮಕೂರಿನ ಸಿದ್ದಗಂಗಾ ಮಠ, ಮೈಸೂರಿನ ಸುತ್ತೂರು ಮಠ ಬೆಂಗಳೂರಿನಲ್ಲಿರುವ ಆದಿ ಚುಂಚನಗಿರಿ ಮಠಗಳಿಗೂ ಭೇಟಿ ನೀಡಿದ್ದಾರೆ. 30 ಜಿಲ್ಲೆಗಳ ಪೈಕಿ 8 ಜಿಲ್ಲೆಗಳಿಗೂ ಭೇಟಿ ನೀಡಿದ್ದಾರೆ. 
ಈ ಎಲ್ಲಾ ಜಿಲ್ಲೆಗಳಿಗೂ ದೇಗುಲಗಳಿಗೆ ಭೇಟಿ ನೀಡುವ ಸಂದರ್ಭದಲ್ಲಿಯೇ ಭೇಟಿ ನೀಡಿದ್ದಾರೆ. ಶೃಂಗೇರಿ ಶಾರದಾಂಬಾ ದೇಗುಲಕ್ಕೆ ಭೇಟಿ ನೀಡುವ ಸಲುವಾಗಿ ಚಿಕ್ಕಮಗಳೂರಿಗೆ ತೆರಳಿದ್ದರು. ಧರ್ಮಸ್ಥಳ ಮಂಜುನಾಥ ದೇಗುಲದಲ್ಲಿ ಪೂಜೆ ಸಲ್ಲಿಸುವ ಸಲುವಾಗಿ ದಕ್ಷಿಣ ಕನ್ನಡ ಜಿಲ್ಲೆಗೆ ತೆರಳಿದ್ದರು. 
ನಾಗಮಂಗಲದಲ್ಲಿರುವ ಕಾಳಭೈರೇಶ್ವರ ದೇಗುಲಕ್ಕೆ ತೆರಳುವ ಸಲುವಾಗಿ ಮಂಡ್ಯ ಜಿಲ್ಲೆಗೆ ತೆರಳಿದ್ದರು. ವಿಧಾನಸಭಾ ಚುನಾವಣೆಗೂ ಮುನ್ನ ಹಾಸನದಲ್ಲಿರುವ ಹಲವು ದೇಗುಲಗಳಿಗೂ ಭೇಟಿ ನೀಡಿದ್ದರು. ಅಧಿಕೃತ ಭೇಟಿಗಿಂತಲೂ ಧಾರ್ಮಿಕವಾಗಿಯೇ ಕುಮಾರಸ್ವಾಮಿಯವರು ರಾಜ್ಯದ ಹಲವು ಜಿಲ್ಲೆಗಳಿಗೆ ಭೇಟಿ ನೀಡಿದ್ದರು ಎಂದು ಜೆಡಿಎಸ್ ಮೂಲಗಳು ಮಾಹಿತಿ ನೀಡಿವೆ. 
SCROLL FOR NEXT