ಬೆಂಗಳೂರು: ಈ ಬಾರಿಯ ಬಜೆಟ್ ನಲ್ಲಿ ಪ್ರಸ್ತಾವಿಸಿರುವಂತೆ ಫಿಲ್ಮಿಂ ಸಿಟಿ ಯೋಜನೆಯನ್ನು ಮೈಸೂರಿನಿಂದ ರಾಮನಗರಕ್ಕೆ ಸ್ಥಳಾಂತರಿಸಬಾರದೆಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಅವರಿಗೆ ಮತ್ತೊಂದು ಪತ್ರ ಬರೆದಿದ್ದಾರೆ.
ಮೈಸೂರಿನಲ್ಲಿ ಫಿಲ್ಮಿಂ ಸಿಟಿ ಸ್ಥಾಪಿಸುವ ಸಂಬಂಧ ಹಿಂದಿನ ಕಾಂಗ್ರೆಸ್ ಸರ್ಕಾರ ನಿರ್ಧಾರ ಕೈಗೊಂಡಿದ್ದು, 100 ಎಕರೆ ಭೂಮಿಯನ್ನು ಹಂಚಿಕೆ ಮಾಡಲಾಗಿದೆ ಮೈಸೂರಿನಲ್ಲಿಯೇ ಫಿಲ್ಮಿಂ ಸಿಟಿ ಆಗಬೇಕೆಂಬುದು ವರನಟ ಡಾ. ರಾಜ್ ಕುಮಾರ್ ಅವರ ಅಭಿಲಾಷೆ ಆಗಿತ್ತು ಎಂದು ಪತ್ರದಲ್ಲಿ ಸಿದ್ದರಾಮಯ್ಯ ತಿಳಿಸಿದ್ದಾರೆ.
1945ರಿಂದಲೂ ಮೈಸೂರಿನ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸಿನಿಮಾ ಚಿತ್ರೀಕರಣವಾಗುತ್ತಿದೆ. ಈಗ ವಿಮಾನ ನಿಲ್ದಾಣ ಇರುವುದರಿಂದ ದೇಶ , ವಿದೇಶಗ ಚಿತ್ರ ನಿರ್ಮಾಪಕರು ಬಂದು ಚಿತ್ರೀಕರಣ ಮಾಡಲು ಸುಲಭವಾಗಿದೆ. ಆದ್ದರಿಂದ ಫಿಲ್ಮಿಂ ಸಿಟಿ ಯೋಜನೆಯನ್ನು ಮೈಸೂರಿನಿಂದ ರಾಮನಗರಕ್ಕೆ ಸ್ಥಳಾಂತರ ಮಾಡುವ ನಿರ್ಧಾರವನ್ನು ಬದಲಿಸುವಂತೆ ಸಿದ್ದರಾಮಯ್ಯ ಮನವಿ ಮಾಡಿದ್ದಾರೆ.
ಬೆಂಗಳೂರು ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯರನ್ನು ಬದಲಿಸದಂತೆ ಹಾಗೂ ಅನ್ನ ಭಾಗ್ಯ ಯೋಜನೆಯಲ್ಲಿ ಬಿಪಿಎಲ್ ಕಾರ್ಡ್ ದಾರರಿಗೆ ನೀಡುತ್ತಿರುವ ಅಕ್ಕಿಯ ಪ್ರಮಾಣವನ್ನು ಕಡಿಮೆ ಮಾಡದಂತೆ ಕಳೆದ ತಿಂಗಳು ಮುಖ್ಯಮಂತ್ರಿಗೆ ಸಿದ್ದರಾಮಯ್ಯ ಪತ್ರ ಬರೆದಿದ್ದರು.