ಬೆಂಗಳೂರು: ನಗದು ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಈಗ ಕಳ್ಳರೂ ಸಹ ಕ್ಯಾಶ್ ಲೆಸ್ ವ್ಯವಹಾರದ ಮೊರೆ ಹೋಗಿದ್ದು, ಸ್ವೈಪಿಂಗ್ ಮಷಿನ್ ನೊಂದಿಗೆ ಬೈಕ್ ನಲ್ಲಿ ಬಂದ ಇಬ್ಬರು ಖದೀಮರು ಖಾಸಗಿ ಕಂಪನಿಯ ಪ್ರಾದೇಶಿಕ ಮಾರಾಟ ಅಧಿಕಾರಿಗೆ ಚಾಕು ತೋರಿಸಿ 16,400 ರುಪಾಯಿಯನ್ನು ತನ್ನ ಖಾತೆಗೆ ವರ್ಗಾವಣೆ ಮಾಡಿಸಿಕೊಂಡಿರುವ ಆಘಾತಕಾರಿ ಘಟನೆ ಬೆಂಗಳೂರಿನ ಜೀವನಭೀಮಾನಗರದಲ್ಲಿ ನಡೆದಿದೆ.
ಕಳೆದ ಆಗಸ್ಟ್ 4ರಂದು ಈ ಘಟನೆ ನಡೆದಿದ್ದು, 31 ವರ್ಷದ ಖಾಸಗಿ ಕಂಪನಿಯ ಅಧಿಕಾರಿ ರಮೇಶ್ ತ್ರಿವೇದಿ(ಹೆಸರು ಬದಲಿಸಲಾಗಿದೆ) ಅವರು ಆಗಸ್ಟ್ 2ರಂದು ತರಬೇತಿಗಾಗಿ ದೆಹಲಿಯಂದ ಬೆಂಗಳೂರಿಗೆ ಬಂದಿದ್ದರು.
ದುಷ್ಕರ್ಮಿಗಳು ಸ್ವೈಪಿಂಗ್ ಮಷಿನ್ ಬಳಸಿ ತಮ್ಮಿಂದ 16,400 ರುಪಾಯಿ ಕಿತ್ತುಕೊಂಡಿದ್ದಾರೆ ಎಂದು ಆರೋಪಿಸಿ ರಮೇಶ್ ತ್ರಿವೇದಿ ಅವರು ಜೀವನಭೀಮಾನಗರ ಪೊಲೀಸ್ ಠಾಣೆಗೆ ದೂರು ನೀಡಿ, ದೆಹಲಿಗೆ ತೆರಳಿದ್ದಾರೆ.
ಪೊಲೀಸರ ಪ್ರಕಾರ, ಕಳೆದ ಶನಿವಾರ ರಾತ್ರಿ ತರಬೇತಿ ನಂತರ ಜೀವನಭೀಮಾನಗರದ 12 ಮುಖ್ಯರಸ್ತೆಯ 5ನೇ ಕ್ರಾಸ್ ನಿಂದ ತಾನು ವಾಸವಿದ್ದ ಹೋಟೆಲ್ ಗೆ ನಡೆದುಕೊಂಡು ಹೋಗುತ್ತಿದ್ದ ವೇಳೆ ಬೈಕ್ ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು, ಚಾಕು ತೋರಿಸಿ ಆತನಲ್ಲಿದ್ದ ಬೆಲೆಬಾಳುವ ವಸ್ತುಗಳು ಮತ್ತು ಪರ್ಸ್ ನಲ್ಲಿದ್ದ 470 ರುಪಾಯಿ ಕಿತ್ತುಕೊಂಡಿದ್ದಾರೆ. ಅಲ್ಲದೆ ಡೆಬಿಟ್ ಕಾರ್ಡ್ ಮೂಲಕ ಹಣ ವರ್ಗಾವಣೆ ಮಾಡುವಂತೆ ಒತ್ತಾಯಿಸಿದ್ದಾರೆ. ಓರ್ವ ಆತನಲ್ಲಿದ್ದ ಡೆಬಿಟ್ ಕಾರ್ಡ್ ಅನ್ನು ಕಿತ್ತುಕೊಂಡು, ಪಿಒಎಸ್ ಮಷಿನಲ್ಲಿ ಸ್ವೈಪ್ ಮಾಡಿ, ಪಾಸ್ ವರ್ಡ್ ಹಾಕುವಂತೆ ಬೆದರಿಸಿದ್ದಾರೆ. ತ್ರಿವೇದಿ ಜೀವಭಯದಿಂದ ಪಾಸ್ ವರ್ಡ್ ಹಾಕಿದ್ದಾರೆ. ಬಳಿಕ ಇಬ್ಬರು ಅಲ್ಲಿಂದ ಪರಾರಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದು, ಹಣ ವರ್ಗಾವಣೆ ಮಾಡಿದ ವಿವರ ಪಡೆಯಲಾಗಿದೆ. ಶೀಘ್ರದಲ್ಲೇ ಆರೋಪಿಗಳನ್ನು ಬಂಧಿಸುವುದಾಗಿ ಪೊಲೀಸರು ತಿಳಿಸಿದ್ದಾರೆ.