ಬೆಂಗಳೂರು: ದೇವೇಗೌಡ ಹಾಗೂ ಜೆ.ಎಚ್. ಪಟೇಲ್ ಸಚಿವ ಸಂಪುಟದಲ್ಲಿ ಅಬಕಾರಿ ಹಾಗೂ ಸಣ್ಣ ನೀರಾವರಿ ಸಚಿವರಾಗಿ ಸೇವೆ ಸಲ್ಲಿಸಿದ್ದ ತಿಪ್ಪೇಸ್ವಾಮಿ(76) ವಿಧಿವಶರಾಗಿದ್ದಾರೆ. ಬಹು ಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದ ತಿಪ್ಪೇಸ್ವಾಮಿ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.
ವಯೋಸಹಜ ಖಾಯಿಲೆಯಿಂದಾಗಿ ಬೆಂಗಳೂರಿನ ಕೊಲಂಬಿಯಾ ಏಷ್ಯಾ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಒಂದು ವಾರದಿಂದ ಚಿಕಿತ್ಸೆ ಪಡೆಯುತ್ತಿದ್ದ ತಿಪ್ಪೇಸ್ವಾಮಿ ವಿಧಿವಶರಾಗಿದ್ದು ಇಂದು ಸಂಜೆ ಚಿತ್ರದುರ್ಗದ ಚಳ್ಳಕೆರೆ ತಾಲೂಕು ಕಾಳಪ್ಪನಹಟ್ಟಿಯಲ್ಲಿ ಅಂತ್ಯ ಸಂಸ್ಕಾರ ವಿಧಿ ವಿಧಾನಗಳು ನೆರವೇರಲಿದೆ.
ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆಯ ಕಾಳಪ್ಪನಹಟ್ಟಿಯವರಾದ ತಿಪ್ಪೇಸ್ವಾಮಿ ಮೂರು ಬಾರಿ ಚಳ್ಳಕೆರೆ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾಗಿದ್ದರು. ಜನತಾ ದಳ ಹಾಗೂ ಜೆಡಿಎಸ್ ನೊಡನೆ ಗುರುತಿಸಿಕೊಂಡಿದ್ದ ಇವರು ದೇವೇಗೌಡ, ಜೆ.ಎಚ್. ಪಟೇಲ್ ಮುಖ್ಯಮಂತ್ರಿಗಳಾಗಿದ್ದ ವೇಳೆ ಸಚಿವರಾಗಿದ್ದರು. ಇದಾದ ಬಳಿಕ ಜೆಡಿಎಸ್ ತೊರೆದು ಬಿಜೆಪಿಗೆ ಸೇರಿದ್ದ ತಿಪ್ಪೇಸ್ವಾಮಿ ಯಡಿಯೂರಪ್ಪ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದರು.
ರಾಜ್ಯದ ವಾಲ್ಮೀಕಿ ಸಮುದಾಯದ ಮುಖಂಡರಾಗಿ ಜನಪ್ರಿಯರಾಗಿದ್ದ ಅವರು ವಾಲ್ಮೀಕಿ ಗುರುಪೀಠ ಸ್ಥಾಪನೆ ಮಾಡುವ ಕಾರ್ಯದಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದರು.ಇವರಿಗೆ ರಾಜ್ಯ ಸರ್ಕಾರ ವಾಲ್ಮೀಕಿ ಪ್ರಶಸ್ತಿ ನೀಡಿ ಗೌರವಿಸಿತ್ತು.
ತಿಪ್ಪೇಸ್ವಾಮಿ ಅವರ ನಿಧನಕ್ಕೆ ಮಾಜಿ ಪ್ರಧಾನಿ ದೇವೇಗೌಡ, ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಸೇರಿ ಅನೇಕ ರಾಜಕೀಯ ಗಣ್ಯರು, ಸಮಾಜದ ಪ್ರಮುಖರು ಸಂತಾಪ ವ್ಯಕ್ತಪಡಿಸಿದ್ದಾರೆ.