ರಾಜ್ಯ

ಹುಬ್ಬಳ್ಳಿ ಕೋರ್ಟ್ ಕಾಂಪ್ಲೆಕ್ಸ್ ಉದ್ಘಾಟಿಸಿದ ಸಿಜೆಐ ದೀಪಕ್ ಮಿಶ್ರಾ

Srinivasamurthy VN
ಹುಬ್ಬಳ್ಳಿ: ಏಷ್ಯಾ ಖಂಡದ ಹೈಟೆಕ್ ಕೋರ್ಟ್ ಕಾಂಪ್ಲೆಕ್ಸ್ ಎಂದೇ ಖ್ಯಾತಿ ಗಳಿಸಿರುವ ಹುಬ್ಬಳ್ಳಿ ಕೋರ್ಟ್ ಕಾಂಪ್ಲೆಕ್ಸ್ ಅನ್ನು ಭಾನುವಾರ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ಅವರು ಉದ್ಘಾಟನೆ ಮಾಡಿದರು.
ಹುಬ್ಬಳ್ಳಿಯ ವಿದ್ಯಾನಗರದ ತಿಮ್ಮಸಾಗರದಲ್ಲಿ ಐದು ಎಕರೆ ಹದಿನೈದು ಗುಂಟೆ ಜಾಗದಲ್ಲಿ ವಿಶೇಷವಾಗಿ ನಿರ್ಮಾಣ ಮಾಡಲಾಗಿರುವ ಕಟ್ಟಡವನ್ನು ಇಂದು ಬೆಳಗ್ಗೆ 11 ಗಂಟೆಗೆ ಸಿಜೆಐ ದೀಪಕ್ ಮಿಶ್ರಾ ಅವರು ಲೋಕಾರ್ಪಣೆ ಮಾಡಿದರು. ಈ ವೇಳೆ ಸಿಎಂ ಕುಮಾರಸ್ವಾಮಿ, ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಾದ ಮೋಹನ್ ಎಂ ಶಾಂತನಗೌಡರ್, ಜಸ್ಚಿಸ್ ಅಬ್ದುಲ್ ನಜೀರ್, ಹೈಕೋರ್ಟ್ ಜಡ್ಜ್ ಗಳಾದ ರವಿ ಮಳಿಮಠ, ಜಸ್ಟಿಸ್ ಬೂದಿಹಾಳ್, ಕರ್ನಾಟಕ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ದಿನೇಶ್ ಮಹೇಶ್ವರಿ ಅವರು ಉಪಸ್ಥಿತರಿದ್ದರು.
ಅಲ್ಲದೆ ಬಸವರಾಜ ಹೊರಟ್ಟಿ, ಜಿಲ್ಲಾ ಉಸ್ತುವಾರಿ ಸಚಿವ ಆರ್ ವಿ ದೇಶಪಾಂಡೆ, ಸಚಿವ ರೇವಣ್ಣ, ಕೃಷ್ಣ ಬೈರೇಗೌಡ, ಸಂಸದ ಪ್ರಹ್ವಾದ್ ಜೋಷಿ, ಶಾಸಕ ಜಗದೀಶ್ ಶೆಟ್ಟರ್ ಅವರು ವಿಶೇಷ ಆಹ್ವಾನಿತರಾಗಿ ಕಾರ್ಯಕ್ರಮಕ್ಕೆ ಹಾಜರಾಗಿದ್ದರು.
ಹೈಟೆಕ್ ಕೋರ್ಟ್ ಕಾಂಪ್ಲೆಕ್ಸ್ ವಿಶೇಷತೆಗಳು
ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ನಿರ್ಮಿಸಲಾಗಿರುವ ನ್ಯಾಯಾಲಯಗಳ ಸಂಕೀರ್ಣ ದೇಶದ ಗಮನ ಸೆಳೆಯುತ್ತಿದೆ. ವಿದ್ಯಾನಗರದ ತಿಮ್ಮಸಾಗರದಲ್ಲಿ ಐದು ಎಕರೆ ಹದಿನೈದು ಗುಂಟೆ ಜಾಗದಲ್ಲಿ ಕಟ್ಟಡ ತಲೆಯೆತ್ತಿದೆ. ಒಟ್ಟು ಏಳು ಮಹಡಿಗಳನ್ನು ಹೊಂದಿರುವ ಈ ಕಟ್ಟಡ ಸಂಪೂರ್ಣ ಹವಾ ನಿಯಂತ್ರಣ ವ್ಯವಸ್ಥೆ ಹೊಂದಿದೆ. ದೇಶದಲ್ಲಿ ಮಾತ್ರವಲ್ಲ ಏಷ್ಯಾದಲ್ಲಿಯೇ ಇದೊಂದು ವಿಶಿಷ್ಟ ಕೋರ್ಟ್‌ ಎಂದು ಹೇಳಲಾಗುತ್ತಿದೆ. ಇಷ್ಟೊಂದು ಬೃಹತ್‌ ಪ್ರಮಾಣದಲ್ಲಿ ಹಾಗೂ ಸುಸಜ್ಜಿತವಾಗಿ ತಾಲ್ಲೂಕು ಕೇಂದ್ರದಲ್ಲಿ ನಿರ್ಮಿಸಲಾಗಿರುವ ಏಕೈಕ ಕಟ್ಟಡ ಎನ್ನುವ ಹೆಗ್ಗಳಿಕೆಗೂ ಹುಬ್ಬಳ್ಳಿಯ ನ್ಯಾಯಾಲಯ ಸಂಕೀರ್ಣ ಪಾತ್ರವಾಗಿದೆ.
ಕೋರ್ಟ್ ಹಾಲ್‌ನಲ್ಲಿ ವಾದಿ-ಪ್ರತಿವಾದಿ ಹಾಗೂ ಸರ್ಕಾರಿ ವಕೀಲರಿಗೆ ಪ್ರತ್ಯೇಕ ಟೇಬಲ್‌ ವ್ಯವಸ್ಥೆ ಮಾಡಲಾಗಿದ್ದು, ನ್ಯಾಯಾಧೀಶರ ಧ್ವನಿ ಕೇಳಿಸಲು ಪಬ್ಲಿಕ್‌ ಅಡ್ರೆಸ್‌ ಸಿಸ್ಟಮ್‌ ಅಳವಡಿಸಲಾಗಿದೆ. ಇಡೀ ಸಂಕೀರ್ಣಕ್ಕೆ ಸಿಸಿಟಿವಿ ಕ್ಯಾಮರಾಗಳ ಕಣ್ಗಾವಲು ಇರಲಿದೆ. ಪ್ರತಿ ಮಹಡಿಯಲ್ಲಿ ನಾಲ್ಕು ನ್ಯಾಯಾಲಯ ಕಲಾಪದ ಸಭಾಂಗಣಗಳಿವೆ. ಲಾಕಪ್‌ ಕೊಠಡಿ ಮತ್ತು ಕಕ್ಷಿದಾರರಿಗೆ ವಿಶ್ರಾಂತಿ ಕೊಠಡಿಗಳಿವೆ. ಒಂದು ಸಾವಿರ ವಾಹನ ನಿಲುಗಡೆ ವ್ಯವಸ್ಥೆ, ಕ್ಯಾಂಟೀನ್‌ ವ್ಯವಸ್ಥೆ, ಶೌಚಾಲಯಗಳ ವ್ಯವಸ್ಥೆಯಿದೆ. ಮಹಿಳೆಯರ ಅನುಕೂಲಕ್ಕಾಗಿ ಮಗುವಿಗೆ ಹಾಲುಣಿಸುವ ಕೊಠಡಿಯನ್ನು ನಿರ್ಮಿಸಲಾಗಿದೆ. ಲೋಕೋಪಯೋಗಿ ಇಲಾಖೆಯ ಉಸ್ತುವಾರಿಯಲ್ಲಿ ಸುಮಾರು 120 ಕೋಟಿ ರೂಪಾಯಿ ವೆಚ್ಚದಲ್ಲಿ ಕೋರ್ಟ್‌ ಸಂಕೀರ್ಣ ನಿರ್ಮಿಸಲಾಗಿದೆ. ಸದ್ಯ 17 ವಿವಿಧ ಹಂತದ ನ್ಯಾಯಾಲಯಗಳು ಈ ಕಟ್ಟಡದಲ್ಲಿ ಕಾರ್ಯನಿರ್ವಹಿಸಲಿವೆ.
SCROLL FOR NEXT