ಬೆಂಗಳೂರು: ಭಾರೀ ಮಳೆ ಹಾಗೂ ಪ್ರವಾಹದಿಂದಾಗಿ ತತ್ತರಿಸಿ ಹೋಗಿರುವ ಕೇರಳ ಹಾಗೂ ಕರ್ನಾಟಕದ ಕೊಡಗು ಜಿಲ್ಲೆಯ ನೆರೆ ಸಂತ್ರಸ್ತರಿಗೆ ಮುಸ್ಲಿಮರು ಸಹಾಯ ಹಸ್ತ ಚಾಚಿದ್ದು, ಈ ಬಾರಿಯ ಬಕ್ರೀದ್ ಹಬ್ಬದ ವೇಳೆ ಬಂದ ಕುರ್ಬಾನಿ ಹಣವನ್ನು ದಾನ ಮಾಡಲು ನಿರ್ಧರಿಸಿದ್ದಾರೆ.
ಮುಸ್ಲಿಂ ಸಮುದಾಯದ ಕೆಲ ಸದಸ್ಯರು 2 ದಿನಗಳ ಹಿಂದಷ್ಟೇ ಕುರ್ಬಾನಿ ಹಣವನ್ನು ನೆರೆ ಸಂತ್ರಸ್ತರಿಗೆ ದಾನ ಮಾಡುವ ಕುರಿತಂತೆ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಗಳನ್ನು ಹಾಗಿದ್ದರು. ಇದಕ್ಕೆ ಹಲವರು ಬೆಂಬಲ ವ್ಯಕ್ತಪಡಿಸಿದ್ದಾರೆ.
ಮಂಗಳೂರು ನಿವಾಸಿ ಅಯಾಝ್ ಅಫ್ರಿದಿ ಎಂಬುವವರು ಮಾತನಾಡಿ, ಸಾಮಾಜಿಕ ಜಾಲತಾಣಗಳಲ್ಲಿ ಬಂದ ಪೋಸ್ಟ್ ಗಳಿಗೂ ಮೊದಲೇ ಈ ಬಗ್ಗೆ ಕೆಲವರ ಬಳಿ ಮಾತುಕತೆ ನಡೆಸಿದ್ದೆ. ಸಂತ್ರಸ್ತರಿಗೆ ನೆರವು ನೀಡಲು ಪ್ರಯತ್ನಗಳನ್ನು ಮಾಡಲಾಗುತ್ತಿದೆ. ಜಾತಿ ಮತ್ತು ನಂಬಿಕೆಗಳನ್ನು ಬದಿಗೊತ್ತಿ ಜನರು ಸಹಾಯ ಮಾಡಲು ಮುಂದಾಗಿದ್ದಾರೆ. ತಮ್ಮ ಬಳಿಯಿರುವ ಸಂಪನ್ಮೂಲಗಳನ್ನು ನೀಡುತ್ತಿದ್ದಾರೆ. ಹೀಗಾಗಿ ಸಂತ್ರಸ್ತರಿಗೆ ಕುರ್ಬಾನಿ ಹಣವನ್ನು ನೀಡಲು ನಾವು ನಿರ್ಧರಿಸಿದ್ದೇವೆಂದು ತಿಳಿಸಿದ್ದಾರೆ.
ಆರ್'ಟಿ ನಗರ ನಿವಾರಿ ಇಮ್ತಿಯಾಜ್ ಅಹ್ಮದ್ ಎಂಬುವವರು ಮಾತನಾಡಿ, ಕುರ್ಬಾನಿ ಹಣವನ್ನು ನೀಡುವುದರಿಂದ ಬಕ್ರೀದ್ ಹಬ್ಬದ ದಿನದಂದು ನಮ್ಮ ಧಾರ್ಮಿಕ ಕರ್ತವ್ಯವನ್ನೂ ನಿಭಾಯಿಸಿದಂತಾಗುತ್ತದೆ. ಪ್ರಾಣಿಗಳ ಬಲಿದಾನ ಮಾಡುವ ಉದ್ದೇಶ ಬಡವರಿಗೆ ಆಹಾರ ಹಾಗೂ ಅಗತ್ಯ ವಸ್ತುಗಳನ್ನು ದಾನ ಮಾಡುವುದಾಗಿದೆ. ಇದೀಗ ಕೊಡಗು ಹಾಗೂ ಕೇರಳ ಭೀಕರ ಪರಿಸ್ಥಿತಿ ಎದುರಿಸುತ್ತಿದ್ದು, ಸಂತ್ರಸ್ತರಿಗೆ ಸಹಾಯ ಮಾಡಲು ನಿರ್ಧರಿಸಿದ್ದೇವೆಂದು ತಿಳಿಸಿದ್ದಾರೆ.
ಇನ್ನು ಕೆಲವರು ರೂ.10,000 ದಿಂದ 2 ಲಕ್ಷದವರೆಗೂ ಹಣವನ್ನು ನೇರವಾಗಿ ದಾನ ಮಾಡುತ್ತಿದ್ದಾರೆ. ಕೆಲವರು ಸಂತ್ರಸ್ತರಿಗೆ ಅಗತ್ಯ ವಸ್ತುಗಳನ್ನು ಖರೀದಿ ಮಾಡಿ ಸಂಬಂಧ ಪಟ್ಟಂತಹ ಸಂಘಟನೆಗಳಿಗೆ ನೀಡಿ ಈಮೂಲಕ ದಾನ ಮಾಡುತ್ತಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics