ಅಕ್ರಮ ಫ್ಲೆಕ್ಸ್ ವಿರುದ್ಧ ಕಿಡಿ: ರಾಜ್ಯವ್ಯಾಪ್ತಿ ಜಾಹೀರಾತು ನೀತಿ ರೂಪಿಸಲು 'ಹೈ' ಸಲಹೆ
ಬೆಂಗಳೂರು: ಅಕ್ರಮ ಜಾಹೀರಾತು, ಫ್ಲೆಕ್ಸ್ ಮತ್ತು ಬ್ಯಾನರ್ ಗಳು ನಗರದಲ್ಲಿ ರಾರಾಜಿಸುತ್ತಿರುವ ಹಿನ್ನಲೆಯಲ್ಲಿ ಬಿಬಿಎಂಪಿ ವಿರುದ್ಧ ತೀವ್ರವಾಗಿ ಕಿಡಿಕಾರಿರುವ ಹೈಕೋರ್ಟ್, ಬಿಬಿಎಂಪಿ ವ್ಯಾಪ್ತಿ ಮಾತ್ರವಲ್ಲದೆ ರಾಜ್ಯವ್ಯಾಪ್ತಿ ಜಾಹೀರಾತು ನೀತಿ ರೂಪಿಸುವಂತೆ ಮಂಗಳವಾರ ಸಲಹೆ ನೀಡಿದೆ.
ಬಿಬಿಎಂಪಿ ವ್ಯಾಪ್ತಿಯಲ್ಲಿರುವ ಅನಧಿಕೃತ ಜಾಹೀರಾತು ಫಲಕಗಳನ್ನು ತೆರವುಗೊಳಿಸುವಂತೆ ರಾಜ್ಯ ಸರ್ಕಾರ ಹಾಗೂ ಬಿಬಿಎಂಪಿಗೆ ನಿರ್ದೇಶಿಸುವಂತೆ ಕೋರಿ ಸಲ್ಲಿಕೆಯಾಗಿರುವ ಮೂರು ಪ್ರತ್ಯೇಕ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ದಿನೇಶ್ ಮಹೇಶ್ವರಿ ಹಾಗೂ ನ್ಯಾಯಮೂರ್ತಿ ಆರ್.ದೇವದಾಸ್ ಅವರಿದ್ದ ಪೀಠ, ಬಿಬಿಎಂಪಿ ಮಾತ್ರವಲ್ಲದೆ ರಾಜ್ಯವ್ಯಾಪ್ತಿ ಜಾಹೀರಾತು ನೀತಿ ರೂಪಿಸುವಂತೆ ಸಲಹೆ ನೀಡಿದೆ.
ವಿಚಾರಣೆ ಆರಂಭವಾಗುತ್ತಿದ್ದಂತೆ ಬಿಬಿಎಂಪಿ ಪರ ವಕೀಲರಾದ ವಿ. ಶ್ರೀನಿಧಿಯವರು ಪಾಲಿಕೆಗೆ ಅನಧಿಕೃತ ಜಾಹೀರಾತು ಫಲಕ ಕುರಿತಂತೆ ನೀಡಿದ್ದ 1192 ಆಕ್ಷೇಪಣೆಗಳ ಬಂದಿವೆ. ಪೂರ್ವ ವಲಯದಲ್ಲಿ 738 ಹಾಗೂ ದಕ್ಷಿಣ ವಲಯದಲ್ಲಿ 243 ಆಕ್ಷೇಪಣೆ ಬಂದಿವೆ. ಅವುಗಳನ್ನು ಪರಿಶೀಲನೆ ನಡೆಸಿ, ದಾಖಲೆಗಳನ್ನು ಅವಲೋಕಿಸಿ ಆದಷ್ಟು ಬೇಗ ಅವುಗಳನ್ನು ಇತ್ಯರ್ಥಪಡಿಸಲಾಗುವುದು ಎಂದರು.
ಈ ವೇಳೆ ಜಾಹೀರಾತು ನೀತಿ ಕುರಿತಂತೆ ಹೈಕೋರ್ಟ್ ಕೇಳಿದ ಪ್ರಶ್ನೆಗೆ ಉತ್ತರಿಸಿದ ವಕೀಲರು, ನೀತಿ ಅಂತಿಮಗೊಳಿಸುವ ಪ್ರಕ್ರಿಯೆಗಳು ನಡೆದಿವೆ. 2016ರ ನೀತಿ ಅವಧಿ ಮುಗಿದ ನಂತರ ಯಾವುದೇ ಪರವಾನಗಿ ನವೀಕರಲಿಸಿಲ್ಲ. ಹೈಕೋರ್ಟ್ ನಲ್ಲಿ ಜಾಹೀರಾತು ಫಲಕ ಕುರಿತ 112 ಪ್ರಕರಣಗಳು, ಸಿವಿಲ್ ಕೋರ್ಟ್ ನಲ್ಲಿ 90 ಪ್ರಕರಣಗಳಿವೆ. 26ರಲ್ಲಿ ತಡೆಯಾಜ್ಞೆಗಳಿವೆ. ಶೀಘ್ರಗತಿಯಲ್ಲಿ ನೀತಿ ಅಖೈರುಗೊಳಿಸಲಾಗುವುದು ಎಂದು ತಿಳಿಸಿದರು.
ಈ ವೇಳೆ ಪ್ರತಿಕ್ರಿಯೆ ನೀಡಿದ ನ್ಯಾಯಾಲಯ ಆ.31ರೊಳಗೆ ನಗರದಲ್ಲಿ ನಡೆಯುತ್ತಿರುವ ಫ್ಲೆಕ್ಸ್ ತೆರವು ಕಾರ್ಯಾಚರಣೆ ತಾರ್ಕಿಕ ಅಂತ್ಯ ಕಾಣಬೇಕೆಂದು ತಿಳಿಸಿ ಅರ್ಜಿ ವಿಚಾರಣೆ ಮುಂದೂಡಿತು.