ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಜ್ಯ

ಸರ್ಕಾರ ಸುಭದ್ರ, ಸರ್ಕಾರ ಪತನದ ಕನಸು ಕಾಣುತ್ತಿರುವ ಅಧಿಕಾರಿಗಳಿಗೆ ಶೀಘ್ರ ಬಿಸಿ ಮುಟ್ಟಿಸುತ್ತೇನೆ: ಎಚ್ ಡಿಕೆ

ಸರ್ಕಾರ ಪತನದ ಕನಸು ಕಾಣುತ್ತಿರುವ ಅಧಿಕಾರಿಗಳಿಗೆ ಶೀಘ್ರ ಬಿಸಿ ಮುಟ್ಟಿಸುತ್ತೇನೆ ಎಂದು ಸಿಎಂ ಕುಮಾರಸ್ವಾಮಿ ಹೇಳಿದ್ದಾರೆ.

ಸಿಎಂ ಕುಮಾರಸ್ವಾಮಿ
Srinivasa Murthy VN
Updated On : 25 Aug 2018, 7:00 am
ಬೆಂಗಳೂರು: ಸರ್ಕಾರ ಪತನದ ಕನಸು ಕಾಣುತ್ತಿರುವ ಅಧಿಕಾರಿಗಳಿಗೆ ಶೀಘ್ರ ಬಿಸಿ ಮುಟ್ಟಿಸುತ್ತೇನೆ ಎಂದು ಸಿಎಂ ಕುಮಾರಸ್ವಾಮಿ ಹೇಳಿದ್ದಾರೆ.
ಮಾಜಿ ಸಿಎಂ ಸಿದ್ದರಾಮಯ್ಯ ಅವರ ಹೇಳಿಕೆ ಬಳಿಕ ಮಾಧ್ಯಮಗಳಲ್ಲಿ ಭುಗಿಲೆದ್ದಿರುವ ಸಮ್ಮಿಶ್ರ ಸರ್ಕಾರದ ಪತನದ ಕುರಿತಂತೆ ಇಂದು ಬೆಂಗಳೂರಿನಲ್ಲಿ ಮಾತನಾಡಿದ ಕುಮಾರಸ್ವಾಮಿ ಅವರು, ಸಮ್ಮಿಶ್ರ ಸರ್ಕಾರ ಪತನವಾಗುವುದಿಲ್ಲ. ಈ ಬಗ್ಗೆ ಯಾರು ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲ. ನಾನು ಎಷ್ಟು ದಿನ ಸಿಎಂ ಆಗಿ ಇರಬೇಕು ಎನ್ನುವುದನ್ನು ಭಗವಂತ ನಿರ್ಧಾರ ಮಾಡುತ್ತಾನೆ. ಕುರ್ಚಿ ಭದ್ರ ಮಾಡಿಕೊಳ್ಳಲು ಪ್ರಯತ್ನಿಸುವುದಿಲ್ಲ. ಆದರೆ ಈ ಸರ್ಕಾರ ಇನ್ನೆಷ್ಟು ದಿನ ಎಂಬ ಲಘು ಭಾವನೆ ಹೊಂದಿರುವ ಅಧಿಕಾರಿಗಳಿಗೂ ಸದ್ಯದಲ್ಲೇ ಚಾಟಿ ಬೀಸುತ್ತೇನೆ ಎಂದು ಗುಡುಗಿದರು.
ಸರ್ಕಾರ ಅಸ್ಥಿರ ಕೆಲವರಿಂದ ಯತ್ನ

Advertisement

Advertisement

ಈ ಸರ್ಕಾರವನ್ನು ಅಸ್ಥಿರಗೊಳಿಸಲು ಕೆಲವರು ಪ್ರಯತ್ನ ನಡೆಸಿದ್ದಾರೆ ಅದು ನನಗೂ ಗೊತ್ತು. ಆದರೆ ಈ ಬಗ್ಗೆ ನಾನು ತಲೆ ಕೆಡಿಸಿಕೊಳ್ಳುವುದಿಲ್ಲ. ಸೆಪ್ಟಂಬರ್ 3 ರಂದು ಹೊಸ ಮುಖ್ಯಮಂತ್ರಿ ಪ್ರಮಾಣವಚನ ಸ್ವೀಕರಿಸುತ್ತಾರೆ ಎಂಬ ವರದಿಗಳನ್ನು ಮಾಧ್ಯಮದಲ್ಲಿ ನೋಡಿದೆ. ಆ ಬಗ್ಗೆ ನನಗೆ ಚಿಂತೆ ಇಲ್ಲ. ಆಕಸ್ಮಿಕವಾಗಿ ಮುಖ್ಯಮಂತ್ರಿಯಾಗಿದ್ದೇನೆ. ಎಷ್ಟು ದಿನ ಇರುತ್ತೇನೋ ಗೊತ್ತಿಲ್ಲ ಆದರೆ ಇರುವಷ್ಟು ದಿನ ಕೈಲಾದ ಜನಸೇವೆ ಮಾಡುತ್ತೇನೆ. ಮುಖ್ಯಮಂತ್ರಿ ಗಿರಿಯನ್ನು ಉಳಿಸಿಕೊಳ್ಳಲು ನಾನು ಯಾವುದೇ ತಂತ್ರಗಾರಿಕೆ ಮಾಡುವುದಿಲ್ಲ. ನನ್ನನ್ನು ಸಿಎಂ ಪಟ್ಟದಿಂದ ಇಳಿಸಲು ಯಾರು ಕಾಯುತ್ತಿದ್ದಾರೋ ಆ ನಾಯಕರು ಇದನ್ನು ಅರ್ಥ ಮಾಡಿಕೊಳ್ಳಲಿ. ನಾನು ಶಾಸಕರ ಜೊತೆ ಹೇಗೆ ನಡೆದುಕೊಳ್ಳುತ್ತಿದ್ದೇನೆ, ಎಂಥ ಬಾಂಧವ್ಯ ಹೊಂದಿದ್ದೇನೆ ಎಂಬುದನ್ನು ಅವರು ನೋಡಬೇಕು ಎಂದು ಸಿಟ್ಟಿನಿಂದ ಹೇಳಿದರು.
ಇದೇ ವೇಳೆ ಯಾವ ಕಾರಣಕ್ಕೂ ಸರ್ಕಾರ ಬೀಳೋದಿಲ್ಲ. ಮಾಧ್ಯಮದವರು ತಲೆ ಕೆಡಿಸಿಕೊಳ್ಳಬೇಡಿ. ಯಾವ ಸೆ. 3 ಎಂಬುದು ಸದ್ಯದಲ್ಲೇ ಗೊತ್ತಾಗುತ್ತದೆ ಎಂದ ಅವರು, ನಾನು ಜಾತಿಯಾಧಾರದ ಮೇಲೆ ಕೆಲಸ ಮಾಡಿಲ್ಲ, ಯಾವ ಅಧಿಕಾರಿಗಳು ಏನು ಮಾಡುತ್ತಿದ್ದಾರೆ ಎಂಬ ಮಾಹಿತಿಯೂ ಇದೆ. ಈ ಅಧಿಕಾರಿಗಳಿಗೂ ಬಿಸಿ ಮುಟ್ಟಿಸಿದ್ದೇನೆ. ಸಮ್ಮಿಶ್ರ ಸರ್ಕಾರ ಇದೇ ತಿಂಗಳು 100 ದಿನ ಪೂರೈಸುತ್ತಿದೆ. ಇನ್ನು ಮುಂದಾದರೂ ಜಾತಿ ರಾಜಕೀಯ, ಗುಂಪು ರಾಜಕೀಯ ಬಿಟ್ಟು ರಾಜ್ಯದ ಅಭಿವೃದ್ಧಿ ವಿಷಯದಲ್ಲಿ ನಮ್ಮ ಜೊತೆ ಕೈಜೋಡಿಸಿ, ಇಲ್ಲವಾದರೆ ಏನು ಮಾಡಬೇಕು ಎನ್ನುವುದು ನನಗೆ ಗೊತ್ತಿದೆ ಎಂದು ಅವರು ಅಧಿಕಾರಿಗಳ ವಿರುದ್ಧ ಕಿಡಿಕಾರಿ ಉತ್ತಮವಾದ ಕೆಲಸಕ್ಕೆ ಪ್ರೋತ್ಸಾಹ ನೀಡಿ ಎಲ್ಲವನ್ನೂ ಹಳದಿ ಕಣ್ಣಿನಿಂದ ನೋಡಿದರೆ ನಾನು ಹೇಗೆ ಕೆಲಸ ಮಾಡುವುದು ಎಂದು ಮಾಧ್ಯಮ ಮಿತ್ರರಿಗೆ ಕೈಜೋಡಿಸಿ ಮನವಿ ಮಾಡುತ್ತೇನೆ ಎಂದರು.
ಕೇಂದ್ರದ ಕಡೆ ಕೈ ಚಾಚಿಲ್ಲ
ಪ್ರತಿಯೊಂದು ಕೆಲಸಕ್ಕೂ ಕೇಂದ್ರದ ಕಡೆ ಕೈ ಚಾಚಲ್ಲ, ರಾಜ್ಯದ ಜನ ಕೊಡುವ ತೆರಿಗೆ ಹಣದಲ್ಲೇ ಪ್ರಾಮಾಣಿಕವಾಗಿ ಕೆಲಸ ಮಾಡುತ್ತೇನೆ ಎಂದರು. ಈ ಕುಮಾರಸ್ವಾಮಿ ಕೈಯಲ್ಲಿ ಏನು ಆಗೊಲ್ಲ ಎಂದು ಎಲ್ಲರೂ ಹೇಳುತ್ತಿದ್ದರು. ಬಡವರು ಹಾಗೂ ರೈತರನ್ನು ಉಳಿಸಲು ಕ್ರಾಂತಿಕಾರಿ ನಿರ್ಧಾರ ತೆಗೆದುಕೊಂಡಿದ್ದೇನೆ. ಮೂಱ್ನಾಲ್ಕು ತಿಂಗಳು ಕಾಯಿರಿ ಕ್ರಾಂತಿಕಾರಿ ವ್ಯವಸ್ಥೆ ಜಾರಿಗೆ ತರುತ್ತೇನೆ. ಚಕ್ರಬಡ್ಡಿ, ಮೀಟರ್ ಬಡ್ಡಿ ತಪ್ಪಿಸಲು ಸರ್ಕಾರದಿಂದಲೇ ಮೊಬೈಲ್ ಬ್ಯಾಂಕಿಂಗ್ ವ್ಯವಸ್ಥೆ ಜಾರಿ ಮಾಡಿ ದಿನಕ್ಕೆ ಬಡವರಿಗೆ ಸಾವಿರ ರೂ. ಬಡ್ಡಿರಹಿತ ಸಾಲ ನೀಡುತ್ತೇನೆ ಎಂದು ಕುಮಾರಸ್ವಾಮಿ ಹೇಳಿದರು.
'ಇದು ಪ್ರಜಾಪ್ರಭುತ್ವ ಯಾರು ಬೇಕಾದರೂ ಸಿಎಂ ಆಗಬಹುದು': ಮಾಜಿ ಸಿಎಂಗೆ ಹಾಲಿ ಸಿಎಂ ಟಾಂಗ್!
ಇದು ಪ್ರಜಾ ಪ್ರಭುತ್ವ. ಹೀಗಾಗಿ ಇಲ್ಲಿ ಯಾರು ಬೇಕಾದರೂ ಮುಖ್ಯಮಂತ್ರಿಯಾಗಬಹುದು ಎಂದು ಸಿಎಂ ಕುಮಾರಸ್ವಾಮಿ ಹೇಳಿದ್ದಾರೆ. ಮುಖ್ಯಮಂತ್ರಿ ಗಾದಿಗೆ ಸಂಬಂಧಿಸಿದಂತೆ ಮಾಜಿ ಸಿಎಂ ಹಾಗೂ ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ ಸಿದ್ದರಾಮಯ್ಯ ಅವರ ಹೇಳಿಕೆಗೆ ಬೆಂಗಳೂರಿನಲ್ಲಿ ಪ್ರತಿಕ್ರಿಯಿಸಿರುವ ಕುಮಾರಸ್ವಾಮಿ ಅವರು, ಯಾರು ಬೇಕಾದರೂ ಮುಖ್ಯಮಂತ್ರಿ ಗಾದಿಗೇರಬಹುದು. ಏಕೆಂದರೆ ಇದು ಪ್ರಜಾಪ್ರಭುತ್ವ. ಪ್ರಜೆಗಳ ನಿರ್ಣಯವೇ ಅಂತಿಮ ಎಂದು ಹೇಳಿದ್ದಾರೆ.
ರೈತರ ಸಾಲಮನ್ನಾ ಮಾಡುವ ನಿರ್ಧಾರಕ್ಕೆ ಹಲವರು ಅಡ್ಡಿ ಮಾಡಿದರು ಎಂದು ಪರೋಕ್ಷವಾಗಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಹರಿಹಾಯ್ದ ಅವರು ಸಾಲಮನ್ನಾ ಮಾಡುವ ಮೂಲಕ ರೈತರನ್ನು ಉಳಿಸುತ್ತೇನೆ ಎಂಬ ಭ್ರಮೆ ಇಲ್ಲ ಆದರೆ ಎಲ್ಲೋ ಒಂದು ಕಡೆ ರೈತರಿಗೆ ನೆರವಾದ ಸಮಾಧಾನ ಇದೆ ಎಂದರು. ಪ್ರತಿಭಾವಂತ ವಿದ್ಯಾರ್ಥಿಗಳಿಗೆ ರಾಷ್ಟ್ರೀಕೃತ ಬ್ಯಾಂಕುಗಳ ಮೂಲಕ ಶೈಕ್ಷಣಿಕ ಸಾಲ ಕಾನೂನು ಜಾರಿಗೆ ತಂದಿದ್ದೇವೆ. ಆಗರೆ ಯಾವ ಬ್ಯಾಂಕುಗಳು ವಿದ್ಯಾರ್ಥಿಗಳಿಗೆ ಸರಿಯಾಗಿ ಸಾಲ ನೀಡುತ್ತಿಲ್ಲ. ಇದರಲ್ಲೂ ಬದಲಾವಣೆ ಅಗತ್ಯವಿದೆ ಎಂದರು.
ಹೇಳಿಕೆ ಸಮರ್ಥಿಸಿಕೊಂಡ ಸಿದ್ದರಾಮಯ್ಯ
ಇದೇ ವೇಳೆ ಮುಂದಿನ ಚುನವಾಣೆಯಲ್ಲಿ ಕಾಂಗ್ರೆಸ್ ಪಕ್ಷ ಗೆದ್ದರೆ ತಾವೇ ಸಿಎಂ ಎಂದು ಹೇಳಿಕೆ ನೀಡಿದ್ದ ಸಿದ್ದರಾಮಯ್ಯ ಅವರು, ತಮ್ಮ ಹೇಳಿಕೆಗೆ ಬದ್ಧರಾಗಿದ್ದಾರೆ. ಇದೇ ವಿಚಾರವಾಗಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಪ್ರಜೆಗಳ ಆಶೀರ್ವಾದ ಮತ್ತು ಭಗಂವತನ ಕೃಪೆ ಇದ್ದರೆ ಖಂಡಿತಾ ಮುಂದಿನ ವಿಧಾನಸಭಾ ಚುನವಾಣೆ ಬಳಿಕ ನಾನು ಮತ್ತೆ ಮುಖ್ಯಮಂತ್ರಿಯಾಗುತ್ತೇನೆ ಎಂದು ಹೇಳಿದ್ದಾರೆ. ಸಮ್ಮಿಶ್ರ ಸರ್ಕಾರದಲ್ಲಿ ಮುಖ್ಯಮಂತ್ರಿಯಾಗುವ ಕುರಿತು ಊಹಾಪೋಹಗಳ ಕುರಿತು ಮಾತನಾಡಿದ ಸಿದ್ದರಾಮಯ್ಯ ಅವರು, ನೀವು ಹೇಗೆ ಬೇಕಾದರೂ ತಿಳಿದುಕೊಳ್ಳಿ. ಆದರೆ ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಬಹುಮತ ಸಾಧಿಸಲಿದೆ ಎಂದು ಹೇಳಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement