ಕೊಡಗು: ಜಿಲ್ಲಾ ಉಸ್ತುವಾರಿ ಸಚಿವರನ್ನು ನಾನು ಹಿಂಬಾಲಿಸಬೇಕಾ ಎಂದು ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಸಾ.ರಾ ಮಹೇಶ್ ಮೇಲೆ ಕೇಂದ್ರ ರಕ್ಷಣಾ ಇಲಾಖೆ ನಿರ್ಮಲಾ ಸೀತಾರಾಮನ್ ಸಾರ್ವಜನಿಕವಾಗಿಯೇ ಸಿಟ್ಟುಗೊಂಡದ್ದು ಇದೀಗ ಮಾಧ್ಯಮಗಳಲ್ಲಿ ವ್ಯಾಪಕ ಸುದ್ದಿಯಾಗಿದೆ.
ಕೇಂದ್ರ ಸಚಿವೆಯಾದ ನಾನು ಜಿಲ್ಲಾ ಉಸ್ತುವಾರಿ ಸಚಿವರನ್ನು ಅನುಸರಿಸುವುದೇ, ಮೊದಲು ನೀವು ಪ್ರತಿನಿಮಿಷದ, ಮಿನಿಟ್ ಟು ಮಿನಿಟ್ ಕಾರ್ಯಕ್ರಮವೇನಿದೆ ಅದರ ಪಟ್ಟಿಯನ್ನು ಮಾಡಬೇಕು, ಬೆಳಗ್ಗೆಯಿಂದ ನಾನು ಪ್ರತಿ ನಿಮಿಷವನ್ನೂ ಫಾಲೋ ಮಾಡ್ತಿದ್ದೇನೆ. ನೀವೇ ನಿಗದಿ ಮಾಡಿದ ವೇಳಾಪಟ್ಟಿಯಂತೆ ಹೋಗುತ್ತಿದ್ದೇನೆ. ನಿಮ್ಮ ನಡುವೆ ಭಿನ್ನಾಭಿಪ್ರಾಯಗಳಿದ್ದರೆ ಅದನ್ನು ಮಾತನಾಡಿ ನೀವೇ ಬಗೆಹರಿಸಿಕೊಳ್ಳಿ, ನನಗೆ ಮುಜುಗರ ಉಂಟು ಮಾಡಬೇಡಿ ಎಂದು ಸಚಿವ ಸಾ ರಾ ಮಹೇಶ್ ಮತ್ತು ಜಿಲ್ಲಾಧಿಕಾರಿ ಶ್ರೀವಿದ್ಯಾ ಅವರಿಗೆ ನಿರ್ಮಲಾ ಸೀತಾರಾಮನ್ ಮಾಧ್ಯಮದ ಮುಂದೆಯೇ ಗುಡುಗಿದ್ದಾರೆ.
ಸಭೆಗೆ ಅಧಿಕಾರಿಗಳನ್ನು ಕರೆದಿದ್ದಕ್ಕೆ ಸಚಿವ ಸಾ ರಾ ಮಹೇಶ್ ಆಕ್ಷೇಪ ವ್ಯಕ್ತಪಡಿಸಿದರು, ಸಂತ್ರಸ್ತರ ಪರಿಹಾರ ರಕ್ಷಣಾ ಕಾರ್ಯಕ್ಕೆ ಅಡ್ಡಿಪಡಿಸಿದರು ಎಂದು ಸಚಿವೆ ನಿರ್ಮಲಾ ಸೀತಾರಾಮನ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ನಿನ್ನೆ ಮಡಿಕೇರಿಯಲ್ಲಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಠಿಗೂ ಮುನ್ನ ಈ ಘಟನೆ ನಡೆದಿದೆ. ನಿರ್ಮಲಾ ಸೀತಾರಾಮನ್ ಮತ್ತು ಸಾ.ರಾ. ಮಹೇಶ್ ನಡುವೆ ಭಿನ್ನಾಭಿಪ್ರಾಯ ಆರಂಭವಾದ ತಕ್ಷಣ ಪತ್ರಕರ್ತರು ಮೈಕ್ನಲ್ಲಿ ಹೇಳಿ ಎಂದು ಕೇಳಿದರು. ಇದಕ್ಕೆ ಮತ್ತಷ್ಟು ಸಿಟ್ಟಾದ ನಿರ್ಮಲಾ ಸೀತಾರಾಮನ್, ಆಯ್ತು ರೆಕಾರ್ಡ್ ಮಾಡಿಕೊಳ್ಳಿ, ಮೈಕ್ ಹೇಗಿದ್ದರೂ ಚಾಲ್ತಿಯಲ್ಲಿದೆ, ನಾನೇನು ತಲೆ ಕೆಡಿಸಿಕೊಳ್ಳುವುದಿಲ್ಲ ಎಂದರು.