ಡಾ.ಶಿವರಾತ್ರಿ ರಾಜೇಂದ್ರ ಮಹಾಸ್ವಾಮಿಗಳ 103ನೇ ಜಯಂತಿ ಮಹೋತ್ಸವ ಕಾರ್ಯಕ್ರಮದಲ್ಲಿ ವೆಂಕಯ್ಯ ನಾಯ್ಡು
ಮೈಸೂರು: ಧಾರ್ಮಿಕ ಮುಖಂಡರು ಹಳ್ಳಿಗಳಿಗೆ ಹೋಗಿ ದಲಿತರನ್ನು ಮತ್ತು ದೌರ್ಜನ್ಯಕ್ಕೆ ಒಳಗಾದ ಜನರನ್ನು ಅಪ್ಪಿಕೊಳ್ಳುವ ಮೂಲಕ ದೇಶದ ಅಭಿವೃದ್ಧಿಯಲ್ಲಿ ಅವರು ಸಹ ಸಮಾನ ಪಾಲುದಾರರು ಎಂಬ ಭಾವನೆ ಮೂಡಿಸಬೇಕು ಎಂದು ಉಪ ರಾಷ್ಟ್ರಪತಿ ಎಂ ವೆಂಕಯ್ಯ ನಾಯ್ಡು ಅವರು ಮಂಗಳವಾರ ಕರೆ ನೀಡಿದ್ದಾರೆ.
ಇಂದು ಸುತ್ತೂರಿನಲ್ಲಿ ಡಾ.ಶಿವರಾತ್ರಿ ರಾಜೇಂದ್ರ ಮಹಾಸ್ವಾಮಿಗಳ 103ನೇ ಜಯಂತಿ ಮಹೋತ್ಸವ ಹಾಗೂ ಶ್ರೀ ಚನ್ನವೀರ ದೇಶಿಕೇಂದ್ರ ಗುರುಕುಲ ಉದ್ಘಾಟನಾ ಸಮಾರಂಭವನ್ನು ನೆರವೇರಿಸಿ ಮಾತನಾಡಿದ ಉಪ ರಾಷ್ಟ್ರಪತಿ, ಧಾರ್ಮಿಕ ಮುಖಂಡರು ಈಗ ಹಳ್ಳಿಗಳಿಗೆ ಭೇಟಿ ನೀಡುವ ಸಮಯ ಬಂದಿದ್ದು, ಅವರು ದಲಿತರನ್ನು ಮತ್ತು ವಾಲ್ಮಿಕಿ ಸಮುದಾಯದ ಜನರನ್ನು ಅಪ್ಪಿಕೊಳ್ಳುವ ಮೂಲಕ ಅವರಿಗೆ ಸಾಂತ್ವನ ಮತ್ತು ಧೈರ್ಯ ತುಂಬಬೇಕು ಎಂದಿದ್ದಾರೆ.
ನಮ್ಮ ಸಂಸ್ಕೃತಿಗೂ ಮತ್ತು ಧರ್ಮಕ್ಕೂ ಸಂಬಂಧ ಇಲ್ಲ. 12ನೇ ಶತಮಾನದ ಸಮಾಜ ಸುಧಾರಕ ಬಸವಣ್ಣ ಹೇಳಿದಂತೆ ಸಂಸ್ಕೃತಿ ಕೇವಲ ಒಂದು ಜೀವನ ವಿಧಾನವಾಗಿದೆ ಎಂದರು.
ಯುವ ಜನತೆ ನಮ್ಮ ಮಾತೃ ಭೂಮಿಯನ್ನು ಪ್ರೀತಿಸಬೇಕು. ಸ್ಥಳೀಯ ಭಾಷೆಗಳು ಬೆಳೆಯಬೇಕು. ನಮ್ಮ ಮಾತೃ ಭಾಷೆ ಕಣ್ಣಿದ್ದಂತೆ. ಇತರ ಭಾಷೆ ಕನ್ನಡಕ ವಿದ್ದಂತೆ. ಕಣ್ಣು ಬಹಳ ಮುಖ್ಯವಾದುದ್ದು ಎಂದು ಉಪರಾಷ್ಟ್ರಪತಿಗಳು ಸಲಹೆ ನೀಡಿದರು.
ಸಮಾರಂಭದಲ್ಲಿ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿ ಗಳು, ಸುತ್ತೂರು ಮತ್ತು ಶ್ರೀಕ್ಷೇತ್ರ ಸಿದ್ಧಗಂಗಾದ ಸಿದ್ಧಲಿಂಗ ಮಹಾಸ್ವಾಮಿಗಳು ದಿವ್ಯ ಸಾನಿಧ್ಯ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ, ಸಚಿವರಾದ ಜಿ.ಟಿ.ದೇವೇಗೌಡ, ಸಾ.ರಾ.ಮಹೇಶ್, ಸಿ.ಎಸ್.ಪುಟ್ಟರಾಜು, ಡಾ.ಯತೀಂದ್ರ ಸಿದ್ದರಾಮಯ್ಯ ಮೊದಲಾದವರು ಉಪಸ್ಥಿತರಿದ್ದರು.