ಬೆಂಗಳೂರು: ಬ್ಲೂ ವೇಲ್ ಚಾಲೆಂಜ್ ಜನಸಮೂಹದಲ್ಲಿ ಭೀತಿಯನ್ನುಂಟುಮಾಡಿತ್ತು. ಅನೇಕ ಮಕ್ಕಳು ಇದರಿಂದ ಪ್ರಾಣ ಕಳೆದುಕೊಂಡಿದ್ದರು. ಇದೀಗ ಅಂತಹದ್ದೇ ಮೊಬೈಲ್ ನಲ್ಲಿ ಆಡುವ ಪಂದ್ಯ ಮಕ್ಕಳನ್ನು ಪ್ರಾಣಕ್ಕೆ ಎರವಾಗಿದೆ. ಅದುವೇ ಮೊಮೊ ಚಾಲೆಂಜ್. ಈ ಅನಿಷ್ಠವನ್ನು ಹೋಗಲಾಡಿಸಲು ನಗರದ ಅಧಿಕಾರಿಗಳು ನಿದ್ದೆಗೆಡುವಂತೆ ಮಾಡಿದೆ. ಈ ಸಂಬಂಧ ಪೋಷಕರು ಮತ್ತು ಶಿಕ್ಷಕರಿಗೆ ಸಲಹಾಗಾರರನ್ನು ಕಳುಹಿಸಲು ಶಾಲೆಗಳು ಯೋಜಿಸುತ್ತಿವೆ.
ಇತ್ತೀಚಿನ ಮಾಧ್ಯಮ ವರದಿ ಪ್ರಕಾರ, ಮೊಮೊ ಚಾಲೆಂಜ್ ಗೇಮ್ ಗೆ ರಾಜಸ್ತಾನದ ಅಜ್ಮೇರ್ ನಲ್ಲಿ 10ನೇ ತರಗತಿ ವಿದ್ಯಾರ್ಥಿಯೊಬ್ಬ ಮತ್ತು ಪಶ್ಚಿಮ ಬಂಗಾಳದಲ್ಲಿ ಮತ್ತೊಬ್ಬ ಬಾಲಕಿಯನ್ನು ಬಲಿ ತೆಗೆದುಕೊಂಡಿದೆ.
ಸಿಬಿಎಸ್ಇ ಶಾಲೆಗಳ ಒಕ್ಕೂಟದ ಅಧ್ಯಕ್ಷ ಎಂ ಶ್ರೀನಿವಾಸನ್, ಈ ಆನ್ ಲೈನ್ ಚಾಲೆಂಜ್ ನ್ನು ನೇರವಾಗಿ ಉಲ್ಲೇಖಿಸುವ ಮೂಲಕ ಯಾರೂ ಕೂಡ ಬೇರೆಯವರಿಗೆ ತೊಂದರೆ ಕೊಡಬಾರದು, ಈ ಬಗ್ಗೆ ಸೂಕ್ಷ್ಮ ಸಂವೇದನಾಗ್ರಹಿತ ಅಭಿಯಾನ ಅತ್ಯಗತ್ಯವಾಗಿದೆ ಎಂದರು.
ಮಕ್ಕಳಲ್ಲಿ ಈ ಬಗ್ಗೆ ಜಾಗೃತಿ ಮೂಡಿಸಿ ಮಕ್ಕಳು ಈ ಆನ್ ಲೈನ್ ಗೇಮನ್ನು ಆಡುತ್ತಿದ್ದಾರೆಯೇ ಎಂದು ಪೋಷಕರು ಮತ್ತು ಶಿಕ್ಷಕರು ನಿಗಾವಹಿಸಬೇಕೆಂದು ಅವರು ಹೇಳುತ್ತಾರೆ.
ರಾಜ್ಯದ ಪ್ರಾಥಮಿಕ ಮತ್ತು ಮಾಧ್ಯಮಿಕ ಶಾಲೆಗಳ ವ್ಯವಸ್ಥಾಪಕ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಡಿ ಶಶಿ ಕುಮಾರ್, ತಮ್ಮ ಒಕ್ಕೂಟದಡಿಯಲ್ಲಿ ಎಲ್ಲಾ ಶಾಲೆಗಳಿಗೆ ಸಲಹೆಗಾರರನ್ನು ಕಳುಹಿಸುವ ಕುರಿತು ಯೋಜನೆ ತಯಾರಾಗುತ್ತಿದೆ ಎಂದಿದ್ದಾರೆ. ಎಲ್ಲಕ್ಕಿಂತ ಹೆಚ್ಚಾಗಿ ಪೋಷಕರು ಮಕ್ಕಳ ಬಗ್ಗೆ ಜಾಗೃತರಾಗಿರಬೇಕು, ಮಕ್ಕಳ ಕೈಗೆ ಮೊಬೈಲ್, ಐಫೋನ್, ಟ್ಯಾಬ್ಸ್ ಮತ್ತು ಎಲೆಕ್ಟ್ರಾನಿಕ್ ಗ್ಯಾಜೆಟ್ಸ್ ಗಳನ್ನು ನೀಡಿ ಅವರ ಪಾಡಿಗೆ ಬಿಟ್ಟುಬಿಡಬಾರದು, ಪೋಷಕರು ಗಮನವಹಿಸುತ್ತಿರಬೇಕು ಎನ್ನುತ್ತಾರೆ.
ಈ ಸಂಬಂಧ ನಿಗಾವಹಿಸುವಂತೆ ಸಮಿತಿ ರಚಿಸುವಂತೆ ಶಶಿ ಕುಮಾರ್ ಪ್ರಾಥಮಿಕ ಮತ್ತು ಮಾಧ್ಯಮಿಕ ಶಾಲೆಗಳ ಇಲಾಖೆ ಪ್ರಧಾನ ಕಾರ್ಯದರ್ಶಿ ಡಾ ಶಾಲಿನಿ ರಜನೀಶ್ ಅವರನ್ನು ಭೇಟಿ ಮಾಡಿದ್ದಾರೆ.
ಈ ಬಗ್ಗೆ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ಪ್ರತಿಕ್ರಿಯಿಸಿದ ಡಾ ಶಾಲಿನಿ ರಜನೀಶ್ ಖಾಸಗಿ ಶಾಲೆಗಳ ಮಕ್ಕಳಿಗೆ ಸರ್ಕಾರಿ ಶಾಲೆ ಮಕ್ಕಳಿಗಿಂತ ಹೆಚ್ಚು ಮೊಬೈಲ್ ಮತ್ತು ಇತರ ಎಲೆಕ್ಟ್ರಾನಿಕ್ ಗೆಜೆಟ್ ಗಳು ಸಿಗುವುದರಿಂದ ಅವರು ತೀವ್ರ ಪರಿಣಾಮಕ್ಕೀಡಾಗುತ್ತಾರೆ. ಇದೊಂದು ಆತಂಕಕಾರಿ ವಿಷಯ. ಈ ಬಗ್ಗೆ ಸದ್ಯದಲ್ಲಿಯೇ ಚರ್ಚೆ ನಡೆಸಿ ಅಗತ್ಯವಿದ್ದರೆ ತಜ್ಞರ ಸಹಾಯ ಪಡೆಯಲಾಗುವುದು ಎಂದರು.