ಬೆಂಗಳೂರು: ಪತ್ನಿಯನ್ನು ಕೊಲೆ ಮಾಡಿದ ಆರೋಪದ ಮೇಲೆ ರಾಮಮೂರ್ತಿ ನಗರ ಪೊಲೀಸರ ವಶದಲ್ಲಿದ್ದ ಲಿಫ್ಟ್ ಆಪರೇಟರ್ ವೊಬ್ಬ ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ಭಾನುವಾರ ನಡೆದಿದೆ.
ಅಭಯರೆಡ್ಡಿ ಲೈಔಟ್'ನ ದೊಡ್ಡಬಾಣಸವಾಡಿ ಮುಖ್ಯರಸ್ತೆಯ ನಿವಾಸಿ ಕೃಷ್ಣಮೂರ್ತಿ (53) ಮೃತಪಟ್ಟಿರುವ ಆರೋಪಿ ಎಂದು ತಿಳಿದುಬಂದಿದೆ.
ಪತ್ನಿ ಮೇಕಳ ದೇವಿ ಅವರನ್ನು ಹತ್ಯೆ ಮಾಡಿದ ಆರೋಪದ ಮೇಲೆ ಕೃಷ್ಣಮೂರ್ತಿಯವರನ್ನು ವಶಕ್ಕೆ ಪಡೆಯಲಾಗಿತ್ತು. ಪೊಲೀಸರ ವಶದಲ್ಲಿದ್ದ ವನೇಳೆ ಆರೋಪಿ ಮೃತಪಟ್ಟಿರುವ ಹಿನ್ನಲೆಯಲ್ಲಿ ಈ ಸಂಬಂಧ ಸಿಐಡಿ ಅಧಿಕಾರಿಗಳು ಪ್ರಕರಣದ ತನಿಖೆ ನಡೆಸಲಿದ್ದಾರೆಂದು ತಿಳಿದುಬಂದಿದೆ.
25 ವರ್ಷಗಳ ಹಿಂದೆ ಕೃಷ್ಣಮೂರ್ತಿ ಮೇಕಾಳ ದೇವಿ ಅವರನ್ನು ವಿವಾಹವಾಗಿದ್ದರು. ದಂಪತಿ ದೊಡ್ಡಬಾಣಸವಾಡಿಯ ಮುಖ್ಯರಸ್ತೆಯಲ್ಲಿ ಬಾಡಿಗೆ ಮನೆಯಲ್ಲಿ ನೆಲೆಸಿದ್ದರು. ದಂಪತಿಗೆ ಮಕ್ಕಳು ಇರಲಿಲ್ಲ. ಇದೇ ವಿಚಾರಕ್ಕೆ ಇಬ್ಬರ ನಡುವೆ ನಿತ್ಯ ಜಗಳವಾಗುತ್ತಿತ್ತು. ನ.20 ರಂದು ಮೇಕಾಳ ದೇವಿ ಅವರ ಕೊಲೆಯಾಗಿತ್ತು.
ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು. ತನಿಖೆ ನಡೆಸಿ ಸ್ಥಳದಲ್ಲಿದ್ದ ಸಿಸಿಟಿವಿ ದೃಶ್ಯಾವಳಿಗಳನ್ನು ವಶಕ್ಕೆ ಪಡೆದು ಪರಿಶೀಲನೆ ನಡೆಸಿದ್ದರು. ಮೊದಲಿಗೆ ಕೃಷ್ಣಮೂರ್ತಿ ಹತ್ಯೆ ಮಾಡಿಲ್ಲ ಎಂದು ಹೇಳಿದ್ದರು. ಬಳಿಕ ಘಟನಾ ಸ್ಥಳದಲ್ಲಿದ್ದ ಸಾಕ್ಷ್ಯ ಹಾಗೂ ಕೃಷ್ಣಮೂರ್ತಿಯವರ ಹೇಳಿಕೆಯಲ್ಲಿ ಗೊಂದಲ ಇರುವುದು ಕಂಡು ಬಂದಿತ್ತು. ಅನುಮಾನದ ಮೇರೆಗೆ ಪೊಲೀಸರು ಭಾನುವಾರ ಮಧ್ಯಾಹ್ನ 12 ಗಂಟೆ ಸುಮಾರಿಗೆ ಕೃಷ್ಣಮೂರ್ತಿಯವರನ್ನು ಠಾಣೆಗೆ ಕರೆತಂದಿದ್ದಾರೆ. ವಿಚಾರಣೆ ವೇಳೆ ಆರೋಪಿ ತಪ್ಪೊಪ್ಪಿಕೊಂಡಿದ್ದಾನೆ.
ಪತ್ನಿಯನ್ನು ಚಾಕುವಿನಿಂದ ಹತ್ಯೆ ಮಾಡಿರುವುದಾಗಿ ಆರೋಪಿ ಒಪ್ಪಿಕೊಂಡಿದ್ದ. ಬಳಿಕ ಚಾಕು ಎಸೆದಿದ್ದ ಸ್ಥಳಕ್ಕೆ ಭಾನುವಾರ ರಾತ್ರಿ 10.45ರ ಸುಮಾರಿಗೆ ಕರೊದೊಯ್ದಿದ್ದಾರೆ. ಬಳಿಕ ಆರೋಪಿ ತೋರಿಸಿದ್ದ ಸ್ಥಳದಲ್ಲಿ ಪೊಲೀಸರು ಚಾಕವನ್ನು ವಶಕ್ಕೆ ಪಡೆದಿದ್ದಾರೆ. ಈ ವೇಳೆ ಕೃಷ್ಣ ಮೂರ್ತಿ ಎದೆನೋವು ಎಂದು ಸ್ಥಳದಲ್ಲಿಯೇ ಕುಸಿದು ಬಿದ್ದಿದ್ದಾನೆ. ಕೂಡಲೇ ಪೊಲೀಸರು ಆರೋಪಿಯನ್ನು ಖಾಸಗಿ ಆಸ್ಪತ್ರೆಗೆ ಕರೆದೊಯ್ದು ದಾಖಲಿಸಿದ್ದಾರೆ. ಆದರೆ, ಪರಿಶೀಲನೆ ನಡೆಸಿದ್ದ ವೈದ್ಯರು ವ್ಯಕ್ತಿ ಮೃತಪಟ್ಟಿದ್ದಾನೆಂದು ಹೇಳಿದ್ದಾರೆ.
ಮೇಲ್ನೋಟಕ್ಕೆ ಆರೋಪಿ ಹೃದಯಾಘಾತದಿಂದ ಮೃತಪಟ್ಟಿದ್ದಾರೆಂದು ತಿಳಿದುಬಂದಿದೆ. ಮರಣೋತ್ತರ ಪರೀಕ್ಷೆ ಬಳಿಕ ಸತ್ಯ ತಿಳಿದುಬರಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics