ಬೆಂಗಳೂರು: ನಕಲಿ ದಾಖಲೆ ಸೃಷ್ಟಿಸಿ ಸಾರ್ವಜನಿಕರು ಹಾಗೂ ಕೋ-ಆಪರೇಟಿವ್ ಸೊಸೈಟಿಗಳಿಗೆ ಬೆದರಿಸಿ ನೂರಾರು ಕೋಟಿ ಮೌಲ್ಯದ ಭೂ ಕಬಳಿಕೆ ಮಾಡಿ, ಅಕ್ರಮವಾಗಿ ಹಣ ಸಂಪಾದನೆ ಮಾಡುತ್ತಿದ್ದ ಆರೋಪಿ ಹಾಗೂ ಆತನ ಸಹಚರನನ್ನು ಪೊಲೀಸರು ಗುರುವಾರ ಬಂಧನಕ್ಕೊಳಪಡಿಸಿದ್ದು, ರೂ.500 ಕೋಟಿ ಮೌಲ್ಯದ ದಾಖಲೆಗಳನ್ನು ವಶಕ್ಕೆ ಪಡೆದುಕೊಕಂಡಿದ್ದಾರೆ.
ಕೆಂಗೇರಿ ಉಪನಗರ ನಿವಾಸಿ ಮಿರ್ಲೆ ವರದರಾಜು (58), ಈತನ ಸಹಚರನಾದ ಡಿಪೋ ನಾಗರಾಜ್ ಬಂಧಿತ ಆರೋಪಿಗಳೆಂದು ತಿಳಿದುಬಂದಿದೆ.
ಆರೋಪಿ ಮಿರ್ಲೆ ವರದರಾಜು ಬಳಿ ಐಷಾರಾಮಿಯ ಮರ್ಸಿಡೀಸ್ ಬೆಂಜ್, ಇನ್ನೋವಾ ಹಾಗೂ ಸ್ಕೋಡಾ ಕಾರು, ಖಾಲಿ ಬಾಂಡ್ ಪೇಪರ್ ಗಳು ಹಾಗೂ ಸುಮಾರು ರೂ.500 ಕೋಟಿಗೂ ಹೆಚ್ಚು ಬೆಲೆ ಬಾಳುವ ಭೂ ದಾಖಲೆಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.
ಪ್ರಕರಣ ಸಂಬಂಧ ದೀಪಕ್ ಎಂಬಾತ ತಲೆಮರೆಸಿಕೊಂಡಿದ್ದು, ಆತನ ಬಂಧನಕ್ಕೆ ಬಲೆ ಬೀಸಲಾಗಿದೆ. ರೌಡಿ ಶೀಟರ್ ಲಕ್ಷ್ಮಣನ ಮನೆ ಮೇಲಿನ ಪ್ರಕರಣಕ್ಕೆ ಸಂಬಂಧಪಟ್ಟಂತೆ ಎರಡು ಬಾರಿ ದಾಳಿ ನಡೆಸಿ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ. ಕೃತ್ಯದಲ್ಲಿ ರೌಡಿ ರಾಮ ಕೂಡ ಭಾಗಿಯಾಗಿದ್ದಾನೆಂದು ಅಪರಾಧ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತ ಅಲೋಕ್ ಕುಮಾರ್ ಅವರು ಹೇಳಿದರು.
ಭೂಮಿ ಸಮಸ್ಯೆ ಎದುರುಸುತ್ತಿರುವ ಜನರ ಬಳಿ ಹೋಗುತ್ತಿದ್ದ ಆರೋಪಿಗಳು ಸಮಸ್ಯೆ ಬಗೆಹರಿಸುವುದಾಗಿ ಹೇಳಿ ಪರಿಶೀಲನೆಗಾಗಿ ಪತ್ರಗಳನ್ನು ಪಡೆದುಕೊಳ್ಳುತ್ತಿದ್ದರು. ನಂತರ ಪತ್ರಗಳನ್ನು ಮರಳಿಸದೆಯೇ ಜನರಿಗೆ ಬೆದರಿಕೆ ಹಾಕುತ್ತಿದ್ದರು. ಮಾರುಕಟ್ಟೆಗೆ ಇರುವ ಬೆಲೆಗಿಂತಲೂ ಕಡಿಮೆ ಬೆಲೆಗೆ ಮಾರಾಟ ಮಾಡುವಂತೆ ಒತ್ತಡ ಹೇರುತ್ತಿದ್ದರು. ಕೇಳದಿದ್ದವರಿಗೆ ರೌಡಿ ಲಕ್ಷ್ಮಣನಿಂದ ಬೆದರಿಕೆ ಹಾಕಿಸುತ್ತಿದ್ದರು ಎಂದು ತಿಳಿಸಿದ್ದಾರೆ.
ಆರೋಪಿ ವಿರುದ್ಧ ಪೊಲೀಸರು ನಡೆಸಿರುವ ತನಿಖೆಯಲ್ಲೂ ಕೆಲ ದೋಷಗಳಿವೆ. ಅನ್ನಪೂರ್ಣೇಶ್ವರಿನಗರದಲ್ಲಿ ದಾಖಲಾಗಿರುವ ಪ್ರಕಱಣದಲ್ಲಿ ಆರೋಪಿ ತಲೆಮರೆಸಿಕೊಂಡಿದ್ದಾನೆಂದು ಹೇಳಲಾಗಿದೆ. ಮತ್ತೊಂದು ಪ್ರಕರಣದಲ್ಲಿ ಎಫ್ಐಆರ್ ನಲ್ಲಿ ವರದರಾಜು ಹೆಸರೇ ಇಲ್ಲ. ಶೀಘ್ರದಲ್ಲಿಯೇ ಪೊಲೀಸ್ ಆಯುಕ್ತರಿಗೆ ವರದಿ ಸಲ್ಲಿಸಲಾಗುತ್ತದೆ ಎಂದಿದ್ದಾರೆ.
ಆರೋಪಿ ವರದರಾಜು ಶ್ರೀರಂಗಪಟ್ಟಣ ಮೂಲದವನಾಗಿದ್ದು, ಈತನ ವಿರುದ್ಧ ಅನ್ನಪೂರ್ಣೇಶ್ವರಿ ನಗರ, ಜ್ಞಾನಭಾರತಿ, ಕೆಂಗೇರಿ ಹಾಗೂ ರಾಜರಾಜೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ 25 ಕ್ರಿಮಿನಲ್ ಪ್ರಕರಣಗಳು ದಾಖಲಾಗಿದವೆ. 80 ಭೂ ವಿವಾದ ಪ್ರಕರಣದಲ್ಲಿ ಆರೋಪಿ ನ್ಯಾಯಾಲಯದ ವಿಚಾರಣೆಗೆ ಹಾಜರಾಗಿದ್ದಾನೆ. ಆರೋಪಿಗಳು ರೌಡಿಗಳನ್ನು ಬಳಸಿಕೊಳ್ಳುವುದರಿಂತ ಸಂತ್ರಸ್ತರು ದೂರು ನೀಡಲು ಹಿಂಜರಿಯುತ್ತಿದ್ದಾರೆ. ಇದಕ್ಕೆ ಜನರು ಹೆದರಬಾರದು. ಮುಂದಕ್ಕೆ ಬಂದು ದೂರು ನೀಡಬೇಕು. ಸಿಸಿಬಿಯೊಂದಿಗೆ ಸಹಕರಿಸಬೇಕೆಂದು ಅಲೋಕ್ ಕುಮಾರ್ ಅವರು ತಿಳಿಸಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos