ಬೆಂಗಳೂರು: ಜಾಹೀರಾತು ಹಾವಳಿ ತಡೆಗೆ ಹೊಸ ಜಾಹೀರಾತು ನೀತಿ ಹಾಗೂ ಬೈಲಾಗಳನ್ನು ಡಿ.12ರೊಳಗೆ ಪೂರ್ಣಗೊಳಿಸುವಂತೆ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ)ಗೆ ಹೈಕೋರ್ಟ್ ಗುರುವಾರ ಸೂಚನೆ ನೀಡಿದೆ.
ನಗರ ವ್ಯಾಪ್ತಿಯಲ್ಲಿ ಅನಧಿಕೃತ ಜಾಹೀರಾತು ಫಲಕಗಳ ತೆರವಿಗೆ ಸಂಬಂಧಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ ವಿಚಾರಣೆಯನ್ನು ನಿನ್ನೆ ಮುಖ್ಯ ನ್ಯಾ.ದಿನೇಶ್ ಮಹೇಶ್ವರಿ ಹಾಗೂ ನ್ಯಾ.ಎಸ್.ಸುಜಾತಾ ಅವರಿದ್ದ ಪೀಠ ನಡೆಸಿತು.
ಬಿಬಿಎಂಪಿ ಪರ ವಾದ ಮಂಡಿಸಿದ ವಕೀಲ ವಿ.ಶ್ರೀನಿಧಿ, ಕರಡು ಜಾಹೀರಾತು ನೀತಿಗೆ ಹಲವು ಆಕ್ಷೇಪಣೆಗಳು ಬಂದಿದ್ದವು. ಈ ಕುರಿತು ಸಾರ್ವಜನಿಕ ವಿಚಾರಣೆಯೂ ನಡೆಸಲಾಗಿದ್ದು, 250 ಮಂದಿ ಪಾಲ್ಗೊಂಡಿದ್ದರು. ಅಲ್ಲಿ ಕೆಲವು ಆಕ್ಷೇಪಣೆ ಮತ್ತು ಸಲಹೆಗಳು ಬಂದಿದ್ದು, ಅವುಗಳನ್ನು ಪರಿಗಣಿಸಲಾಗಿದೆ. ಶೀಘ್ರವೇ ಜಾಹೀರಾತು ನೀತಿ ಅಂತಿಮಗೊಳಿಸಿ ಸರ್ಕಾರಕ್ಕೆ ಸಲ್ಲಿಸಲಾಗುತ್ತದೆ ಎಂದು ತಿಳಿಸಿದರು.
ವಿಭಾಗೀಯ ಪೀಠವು, ಈ ವಿಚಾರದಲ್ಲಿ ಮತ್ತಷ್ಟು ವಿಳಂಬ ಮಾಡಬೇಡಿ. ಡಿ.12ರೊಳಗೆ ಜಾಹೀರಾತು ನೀತಿ ಅಂತಿಮಗೊಳಿಸಿ ಸರ್ಕಾರಕ್ಕೆ ಸಲ್ಲಿಸಿ ಎಂದು ಪಾಲಿಕೆಗೆ ಇದೇ ವೇಳೆ ಸೂಚಿಸಿತು.