ಮಂಡ್ಯ: ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಪೆಂಟಾವೇಲೆಂಟ್ ಚುಚ್ಚುಮದ್ದು ಹಾಕಿಸಿಕೊಂಡಿದ್ದ 2 ತಿಂಗಳ ಹಸುಕಂದಮ್ಮ ಮೃತಪಟ್ಟಿರುವ ಘಟನೆ ಮದ್ದೂರು ತಾಲೂಕಿನ ಕಾಡುಕೊತ್ತನಹಳ್ಳಿಯಲ್ಲಿ ನಡೆದಿದೆ.
ಜ್ಯೋತಿ ಹಾಗೂ ಸ್ವಾಮಿ ದಂಪತಿ ತಮ್ಮ ಎರಡು ತಿಂಗಳ ಮಗುವಿಗೆ ಚುಚ್ಚುಮದ್ದು ಹಾಕಿಸಿದ ಕೆಲವೇ ಗಂಟೆಗಳಲ್ಲಿ ಮಗು ಮೃತಪಟ್ಟಿದೆ. ಕಳೆದ 8 ತಿಂಗಳ ಅವಧಿಯಲ್ಲಿ ಮಂಡ್ಯದಲ್ಲಿ ಸಂಭವಿಸಿದ 2ನೇ ಪ್ರಕರಣ ಇದಾಗಿದೆ.
ಜ್ಯೋತಿ ಮಗುವಿಗೆ ಪೆಂಟಾ ಚುಚ್ಚುಮದ್ದು ಹಾಕಿಸಲು ಗುರುವಾರ ಆರೋಗ್ಯ ಕೇಂದ್ರಕ್ಕೆ ಕರೆ ತಂದಿದ್ದರು. ವೈದ್ಯೆ ಮಂಜುಳಾ ಬೆಳಗ್ಗೆ ಮಗುವಿಗೆ ಚುಚ್ಚುಮದ್ದು ನೀಡಿದ್ದರು. ನಂತರ ಮಗು ಅಳಲು ಆರಂಭಿಸಿದೆ. ಮಧ್ಯರಾತ್ರಿ 12ಗಂಟೆ ಸಮಯಕ್ಕೆ ಸಣ್ಣದಾಗಿ ಮಗುವಿಗೆ ಜ್ವರ ಕಾಣಿಸಿಕೊಂಡಿದ್ದು, ಇದರಿಂದ ಆತಂಕಗೊಂಡ ಪೋಷಕರು ಶುಕ್ರವಾರ ಬೆಳಿಗ್ಗೆ 9ಕ್ಕೆ ಪ್ರಾತಮಿಕ ಆರೋಗ್ಯ ಕೇಂದ್ರಕ್ಕೆ ಮಗುವನ್ನು ಕರೆತಂದಿದ್ದಾರೆ.
ವೈದ್ಯರಿಕೆ ಕರೆ ಮಾಡಿ ವಿಷಯ ತಿಳಿಸಿದಾಗ ಹೆಚ್ಚಿನ ಚಿಕಿತ್ಸೆಗೆ ಕೆ.ಎಂ.ದೊಡ್ಡಿ ಆಸ್ಪತ್ರೆಗೆ ಕರೆದೊಯ್ಯುವಂತೆ ತಿಳಿಸಿದ್ದಾರೆ. ಆದರೆ, ಆ ಆಸ್ಪತ್ರೆಗೆ ಕೊಂಡೊಯ್ಯುವ ಮಾರ್ಗದ ಮಧ್ಯೆಯೇ ಮಗು ಮೃತಪಟ್ಟಿದೆ. ಮಗುವನ್ನು ಆಸ್ಪತ್ರೆಗೆ ಕರೆತಂದ ವೇಳೆ ಆಸ್ಪತ್ರೆಯ ಸಿಬ್ಬಂದಿಯೂ ಸಮರ್ಪಕವಾಗಿ ಚಿಕಿತ್ಸೆ ನೀಡಲಿಲ್ಲ. ಆಸ್ಪತ್ರೆ ಸಿಬ್ಬಂದಿ ಹಾಗೂ ವೈದ್ಯರ ನಿರ್ಲಕ್ಷ್ಯದಿಂದಲೇ ಮಗು ಮೃತಪಟ್ಟಿದೆ ಎಂದು ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.