ರಾಜ್ಯ

2ನೇ ರಾಜಧಾನಿಯಾಗಲಿದೆಯೇ ಬೆಳಗಾವಿ?: ಬಿಜೆಪಿ ಆರೋಪಗಳಿಗೆ ತಕ್ಕ ಉತ್ತರ ನೀಡಲು ಸಿಎಂ ಸಿದ್ಧತೆ

Manjula VN
ಬೆಂಗಳೂರು: ಉತ್ತರ ಕರ್ನಾಟಕ ಭಾಗವನ್ನು ನಿರ್ಲಕ್ಷಿಸುತ್ತಿರುವ ಸಿಎಂ, ಈ ಮೂಲಕ ಮಲತಾಯಿ ಧೋರಣೆ ಅನುಸರಿಸುತ್ತಿದ್ದಾರೆಂದು ಆರೋಪ ಮಾಡುತ್ತಿರುವ ಬಿಜೆಪಿಗೆ ತಕ್ಕ ಉತ್ತರವನ್ನೇ ನೀಡಲು ಮುಖ್ಯಮಂತ್ರಿ ಕುಮಾರಸ್ವಾಮಿಯವರು ಸಿದ್ಧತೆ ನಡೆಸಿದ್ದಾರೆ. 
ಬೆಳಗಾವಿಯನ್ನು ರಾಜ್ಯದ ಎರಡನೇ ರಾಜಧಾನಿ ಮಾದರಿಯಲ್ಲಿ ಅಭಿವೃದ್ಧಿಪಡಿಸಲು ಕುಮಾರಸ್ವಾಮಿಯವರು ಗಂಭೀರ ಚಿಂತನೆ ನಡೆಸುತ್ತಿದ್ದಾರೆಂದು ವರದಿಗಳು ತಿಳಿಸಿವೆ. 
ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯದ ಕೂಗಿಗೆ, ಗಡಿ ವಿವಾದ, ಎಂಇಎಸ್ ಪುಂಡಾಟಿಕೆ ಸೇರಿದಂತೆ ಇತರೆ ಸಮಸ್ಯಗಳಿಗೆ ಇತಿಶ್ರೀ ಹಾಡುವ ಸಲುವಾಗಿ ಸಿಎಂ ಇಂತಹ ಚಿಂತನೆಯೊಂದನ್ನು ನಡೆಸುತ್ತಿದ್ದಾರೆಂದು ಹೇಳಲಾಗುತ್ತಿದೆ. 
ಬರ ಪರಿಸ್ಥಿತಿ ಎದುರಾಗಿರುವ ಉತ್ತರ ಕರ್ನಾಟಕ ಭಾಗಕ್ಕೆ ಸಿಎಂ ಭೇಟಿ ನೀಡದಿರುವುದನ್ನೇ ಅಸ್ತ್ರವನ್ನಾಗಿ ಬಳಸಿಕೊಂಡಿರುವ ಬಿಜೆಪಿ ಪ್ರತಿನಿತ್ಯ ಆರೋಪ ಮಾಡುತ್ತಲೇ ಇದೆ. ಬೆಳಗಾವಿ ಅಧಿವೇಶನದಲ್ಲಿಯೂ ಈ ವಿಷಯವನ್ನಿಟ್ಟುಕೊಂಡು ಸರ್ಕಾರವನ್ನು ತರಾಟೆಂಗೆ ತೆಗೆದುಕೊಳ್ಳಲು ಬಿಜೆಪಿ ತಂತ್ರಗಾರಿಕೆ ರೂಪಿಸಿದೆ. 
ಬಿಜೆಪಿಯ ತಂತ್ರಕ್ಕೆ ಇದೀಗ ಪ್ರತಿತಂತ್ರ ರೂಪಿಸಿರುವ ಕುಮಾರಸ್ವಾಮಿಯವರು, ರಾಜ್ಯ ರಾಧಾನಿ ಬೆಂಗಳೂರು ಮಾದರಿಯಲ್ಲಿಯೇ ಬೆಳಗಾವಿಯನ್ನೂ ಅಭಿವೃದ್ಧಿಪಡಿಸಲು ಮುದಾಗಿದ್ದಾರೆ. ಉತ್ತರ ಕರ್ನಾಟಕ ಭಾಗಕ್ಕೆ ಭರಪೂರ ಯೋಜನೆಗಳನ್ನು ಪ್ರಕಟಿಸಿ ಉತ್ತರ ಕರ್ನಾಟಕವನ್ನು ನಿರ್ಲಕ್ಷಿಸಿಲ್ಲ ಎಂಬ ಸಂದೇಶವನ್ನು ಈ ಮೂಲಕ ಸಾರಲು ಹೊರಟಿದ್ದಾರೆ. 
ಸಾಂವಿಧಾನಿಕವಾಗಿ ಬೆಳಗಾವಿಯನ್ನು ಎರಡನೇ ರಾಜಧಾನಿಯನ್ನಾಗಿ ಘೋಷಿಸಲು ಕಾನೂನು ಅಡ್ಡಿಯುಂಟಾದರೆ, ಎರಡನೇ ರಾಜಧಾನಿ ಎಂದು ಘೋಷಿಸುವ ಬದಲು ರಾಜಧಾನಿ ಕೇಂದ್ರವನ್ನು ಅಭಿವೃದ್ಧಿಪಡಿಸುವ ಮಾದರಿಯಲ್ಲಿ ಅಭಿವೃದ್ಧಿ ಪಡಿಸುವ ಬಗ್ಗೆ ಘೋಷಣೆ ಮಾಡಿ ಪ್ರತಿಪಕ್ಷಕ್ಕೆ ತಿರುಗೇಟು ನೀಡುವ ಬಗ್ಗೆ ಆಲೋಚನೆ ನಡೆಸಿದ್ದಾರೆಂದು ಮೂಲಗಳು ತಿಳಿಸಿವೆ. 
SCROLL FOR NEXT