ಬೆಂಗಳೂರು: ಪ್ರೇಮಿಗಳಂತೆ ನಟಿಸಿ ಅಪಹರಣಕಾರರನ್ನು ಬಂಧಿಸುವಲ್ಲಿ ಶಿವಾಜಿನಗರ ಪೊಲೀಸರು ಯಶಸ್ವಿಯಾಗಿದ್ದಾರೆ.
ಶಿವಾಜಿನಗರ ಸಬ್ ಇನ್ಸ್ ಪೆಕ್ಟರ್ ಶೀಲಾ ಹಾಗೂ ಸಹೋದ್ಯೋಗಿ ಸಮೀವುಲ್ಲಾ ಪ್ರೇಮಿಗಳಂತೆ ನಟಿಸಿ ಅಪಹರಣಕಾರರನ್ನು ಬಂಧಿಸಿದ್ದಾರೆ,ಇದೇ ತಿಂಗಳ 9 ರಂದು ನಗರದ ಕ್ವೀನ್ಸ್ ರಸ್ತೆಯಲ್ಲಿ ಕಿಡ್ನಾಪ್ ನಡೆದಿತ್ತು. ಡೈರೆಕ್ಟ್ ಸೆಲ್ಲಿಂಗ್ ಟೂರ್ಸ್ ಆಂಡ್ ಟ್ರಾವೆಲ್ಸ್ ಸಿಬ್ಬಂದಿ ಕಾರ್ತಿಕ್ ಎಂಬವರನ್ನು ಕಿಡ್ನಾಪ್ ಮಾಡಲಾಗಿತ್ತು. ಆದರೆ ಈಗ ಪೊಲೀಸರು ಪ್ರೇಮಿಗಳಂತೆ ನಟನೆ ಮಾಡಿ ಆರೋಪಿಗಳನ್ನು ಬಂಧಿಸಿದ್ದಾರೆ.
ಹಫೀಜ್, ಗೌಸ್ ಪೀರ್, ಫಯಾಜ್ ಹಾಗೂ ಶೇಖ್ ಎಂಬವರು ಟ್ರಾವೆಲ್ಸ್ ನಲ್ಲಿ ಪ್ಯಾಕೇಜ್ ಬುಕ್ ಮಾಡಿದ್ದರು. ನಂತರ ಟೂರ್ ಪ್ಯಾಕೇಜ್ ಇಷ್ಟವಿಲ್ಲ ಎಂದು ಹಣ ನೀಡುವಂತೆ ಮಾಲೀಕನಿಗೆ ಬೆದರಿಕೆ ಹಾಕಿದ್ದರು. ಇಲ್ಲವಾದಲ್ಲಿ ಸಿಬ್ಬಂದಿ ಕಾರ್ತಿಕ್ ನನ್ನು ಕಿಡ್ನಾಪ್ ಮಾಡುವುದಾಗಿ ಬೆದರಿಕೆ ಹಾಕಿದ್ದರು. ಅದರಂತೆಯೇ ದಿನಾಂಕ 9ರಂದು ಟೂರ್ಸ್ ಆಂಡ್ ಟ್ರಾವೆಲ್ಸ್ ನ ಮಾಲೀಕ ಸಂಜೀವ್ ಗೆ ಕರೆ ಮಾಡಿ ಕಿಡ್ನಾಪ್ ಮಾಡಿ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದರು.
ಇದರಿಂದ ಮಾಲೀಕ ಸಂಜೀವ್ ಭಯದಿಂದ ಶಿವಾಜಿನಗರ ಪೊಲೀಸರಿಗೆ ದೂರು ನೀಡಿದ್ದರು. ದೂರು ದಾಖಲಿಸಿಕೊಂಡ ಪೊಲಿಸರು ಆರೋಪಿಗಳಿಗಾಗಿ ಬಲೆ ಬೀಸಿದ್ದರು. ಅಪಹರಣಕಾರರಿಗೆ ಅನುಮಾನ ಬಾರದಿರಲಿ ಎಂದು ಶಿವಾಜಿನಗರ ಸಬ್ ಇನ್ಸ್ ಪೆಕ್ಟರ್ ಶೀಲಾ ಹಾಗೂ ಕ್ರೈಂ ಸಿಬ್ಬಂದಿ ಪ್ರೇಮಿಗಳಂತೆ ನಟನೆ ಮಾಡಿ ಬಳಿಕ ಆರೋಪಿಗಳ ಸಮೀಪ ಹೋಗಿ ಅವರನ್ನು ಬಂಧಿಸಿದ್ದಾರೆ.