ಬೆಂಗಳೂರು: ಕ್ಷುಲ್ಲಕ ಕಾರಣಕ್ಕೆ ವ್ಯಕ್ತಿಯೊಬ್ಬನಿಗೆ ಚಾಕುವಿನಿಂದ ಇರಿದು ಹತ್ಯೆ ಮಾಡಿರುವ ಘಟನೆ ಬೆಂಗಳೂರಿನಲ್ಲಿ ಭಾನುವಾರ ಬೆಳಗ್ಗೆ ನಡೆದಿದೆ.
ಬೆಂಗಳೂರಿನ ಕುರುಬರಹಳ್ಳಿ ಸರ್ಕಲ್ ಬಳಿ ಈ ದುರ್ಘಟನೆ ನಡೆದಿದೆ. ಕುರುಬರಹಳ್ಳಿ ಸರ್ಕಲ್ ಬಳಿಯ ಸಾಯಿ ಕಾಂಡಿಮೆಂಟ್ಸ್ ಮಾಲೀಕ ಮಂಜುನಾಥ್(55) ಮೃತ ದುರ್ದೈವಿ. ಇಂದು ಬೆಳಗ್ಗೆ ಸಾಯಿ ಕಾಂಡಿಮೆಂಟ್ಸ್ ಮಾಲೀಕ ಮಂಜುನಾಥ್ ಅವರು ಅಂಗಡಿ ಬಾಗಿಲು ತೆರೆದು ಅಂಗಡಿ ಮುಂಭಾಗ ನೀರು ಹಾಕುವಾಗ ಆಕಾಶ್ ಎಂಬಾತ ಅಂಗಡಿ ಮುಂದೆ ನಿಂತಿದ್ದ. ಈ ವೇಳೆ ಆತನಿಗೆ ನೀರು ತಾಕಿದೆ. ಇದೇ ಕಾರಣಕ್ಕೆ ಆತ ಜಗಳ ತೆಗೆದಿದ್ದು ಬಾಯಿಗೆ ಬಂದಂತೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ. ನೋಡ ನೋಡುತ್ತಲೇ ಆತನ ದಾಂಧಲೆ ಮಿತಿ ಮೀರಿದ್ದು, ಜಗಳ ತಾರಕಕ್ಕೇರಿ ಚಾಕು ತೆಗೆದು ಮಂಜುನಾಥ್ ಅವರ ಎದೆ, ಬೆನ್ನು ಹಾಗೂ ಪಕ್ಕೆಲುಬಿಗೆ ಚಾಕುವಿನಿಂದ ಇರಿದು ಪರಾರಿಯಾಗಿದ್ದಾನೆ.
ರಕ್ತದ ಮಡುವಿನಲ್ಲಿದ್ದ ಮಂಜುನಾಥ್ ರನ್ನು ಕೂಡಲೇ ಸಾರ್ವಜನಿಕರು ಖಾಸಗಿ ಆಸ್ಪತ್ರೆಗೆ ದಾಖಲಿಸಿದರಾಗರೂ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಆರೋಪಿ ಆಕಾಶ್ ಕುಡಿದ ಆಮಲಿನಲ್ಲಿ ಕೃತ್ಯವೆಸಗಿರುವ ಶಂಕೆ ವ್ಯಕ್ತವಾಗಿದೆ. ಘಟನಾ ಸ್ಥಳಕ್ಕೆ ಮಹಾಲಕ್ಷ್ಮಿ ಲೇಔಟ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಲ್ಲದೆ ಪರಾರಿಯಾಗಿರುವ ಆಕಾಶ್ ಬಂಧನಕ್ಕೆ ಬಲೆ ಬೀಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics