ರಾಜ್ಯ

ವಿಷ ಪ್ರಸಾದ ದುರಂತ: ಪೊಲೀಸ್ ತನಿಖೆ ಚುರುಕು, ಮತ್ತಿಬ್ಬರು ಆರೋಪಿಗಳ ಬಂಧನ

Srinivasamurthy VN
ಚಾಮರಾಜನಗರ: ಹನೂರು ತಾಲೂಕಿನ ಸುಳ್ವಾಡಿ ಗ್ರಾಮದ ಮಾರಮ್ಮ ದೇಗುಲದ ಪ್ರಸಾದ ಸೇವಿಸಿ ಮೃತಪಟ್ಟ ಹಾಗೂ ಅಸ್ವಸ್ಥಗೊಂಡ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸರು ತನಿಖೆ ಚುರುಕುಗೂಳಿಸಿದ್ದು, ಮತ್ತಿಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ.
ಕಿಚ್ಚುಗುತ್ತಿ ಮಾರಮ್ಮ ದೇವಾಲಯದ ಅರ್ಚಕ ಹಾಗೂ ಮತ್ತಿಬ್ಬರನ್ನು ವಶಕ್ಕೆ ಪಡೆದಿದ್ದಾರೆ. 12 ಜನರ ಸಾವಿಗೆ ಕಾರಣರಾದವರನ್ನು ಪತ್ತೆ ಹಚ್ಚಲು ತನಿಖೆ ಚುರುಕುಗೊಳಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಧರ್ವೆಂದ್ರ ಕುಮಾರ್ ಮೀನಾ ಅವರು ತಿಳಿಸಿದ್ದಾರೆ. ಶುಕ್ರವಾರ ಸುಳ್ವಾಡಿಯ ಚಿಣ್ಣಪ್ಪಿ, ಮಾದೇಶ್ ಎಂಬುವವರನ್ನು ವಶಕ್ಕೆ ಪಡೆಯಲಾಗಿತ್ತು. ಆ ಮೂಲಕ ಪ್ರಕರಣದಲ್ಲಿ ಈ ವರೆಗೂ ಬಂಧನಕ್ಕೀಡಾದವರ ಸಂಖ್ಯೆ 5ಕ್ಕೆ ಏರಿಕೆಯಾಗಿದೆ.
ಟೊಮ್ಯಾಟೋ ಬಾತ್ ನಲ್ಲಿ ವಿಷಕಾರಿ ರೋಗರ್ ಕೀಟನಾಶಕ ಬೆರೆಸಿರುವ ಶಂಕೆ!
ಇನ್ನು ಮಾರಮ್ಮ ದೇಗುಲದಲ್ಲಿ ಭಕ್ತರಿಗೆ ನೀಡಲಾಗಿದ್ದ ಟೊಮ್ಯಾಟೋ ಬಾತ್‍ ನಲ್ಲಿ ರೋಗರ್ ಕೀಟನಾಶಕ ಬೆರೆಸಿರುವ ಕುರಿತು ಶಂಕೆ ವ್ಯಕ್ತವಾಗಿದೆ. ಪ್ರಸ್ತುತ ಅಸ್ವಸ್ಥರಾಗಿ ದಾಖಲಾಗಿರುವ ಬಹುತೇಕ ಸಂತ್ರಸ್ಥರಲ್ಲಿ ಆರ್ಗನೋ ಪಾಸ್ಪರಸ್ ರಾಸಾಯನಿಕಕ್ಕೆ ನೀಡಲಾಗುವ ಚಿಕಿತ್ಸೆ ನೀಡಲಾಗುತ್ತಿದೆ. ಆಸ್ಪತ್ರೆಗೆ ದಾಖಲಾಗಿರುವ ಅಸ್ವಸ್ಥರಿಗೆ ಆಟ್ರೋಪೈನ್ ಸಲ್ಫಟ್ ಔಷಧ ನೀಡಲಾಗುತ್ತಿದೆ. ಸಾಮಾನ್ಯವಾಗಿ ಈ ಔಷಧವನ್ನು ಆರ್ಗನೋ ಪಾಸ್ಪರಸ್ ರಾಸಾಯನಿಕ ಸೇವಿಸಿದವರಿಗೆ ನೀಡಲಾಗುತ್ತದೆ. ಈ ರಾಸಾಯನಿಕ ರೋಗರ್ ಎಂಬ ಕೀಟನಾಶಕದಲ್ಲಿ ಮಾತ್ರ ಬಳಸಲಾಗುತ್ತೆ. ಹೀಗಾಗಿ ಪ್ರಸಾದದಲ್ಲಿ ರೋಗರ್ ಕೀಟನಾಶಕವನ್ನೇ ಬೆರೆಸಲಾಗಿದೆ ಎಂಬ ಶಂಕೆ ವ್ಯಕ್ತವಾಗಿದೆ. ಇಂದು ಸಂಜೆ ವಿಧಿವಿಜ್ಞಾನ ಪ್ರಯೋಗಾಲಯ ವರದಿ ಬರಲಿದ್ದು, ಪ್ರಸಾದಕ್ಕೆ ಏನು ಬೆರೆಸಲಾಗಿತ್ತು ಮತ್ತು ಯಾವ ಪ್ರಮಾಣದಲ್ಲಿ ಬೆರೆಸಲಾಗಿತ್ತು ಎಂಬುದು ಸ್ಪಷ್ಟವಾಗಲಿದೆ.
ಅಂತೆಯೇ ಟೊಮ್ಯಾಟೋ ಬಾತ್ ಗೆ ಬಳಸಿದ ಅಕ್ಕಿ ಮತ್ತಿತ್ತರ ಸಾಮಾಗ್ರಿಗಳ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ಅಕ್ಕಿ ತಂದಿದ್ದು ಎಲ್ಲಿಂದ, ತಂದವರು ಯಾರು..? ಎಂಬಿತ್ಯಾದಿ ಮಾಹಿತಿಗಳನ್ನು ಸಂಗ್ರಹಿಸುತ್ತಿದ್ದಾರೆ. ಅಲ್ಲದೆ ಈಗಾಗಲೇ ಮೂರು ತಂಡಗಳನ್ನು ರಚಿಸಿ ಕಾರ್ಯಾಚರಣೆಗಿಳಿದಿದ್ದಾರೆ. ಶನಿವಾರ ಸಂಜೆ ದೇವಸ್ಥಾನಕ್ಕೆ ಭೇಟಿ ನೀಡಿದ ದಕ್ಷಿಣ ವಲಯ ಐಜಿಪಿ ಶರತ್ಚಂದ್ರ, ಸತತ 5 ಗಂಟೆಗಳ ಕಾಲ ದೇವಸ್ಥಾನದ ಇಂಚಿಂಚೂ ಪರಿಶೀಲನೆ ನಡೆಸಿದ್ದರು. ಇದೇ ವೇಳೆ ದೇವಸ್ಥಾನ ಧರ್ಮಾಧಿಕಾರಿ ಚಿನ್ನಪ್ಪಿ, ಮ್ಯಾನೇಜರ್ ಮಾದೇಶ್ ರನ್ನು ಕರೆದೊಯ್ದು ಸ್ಥಳ ಮಹಜರು ಮಾಡುವ ವೇಳೆಯೂ ಸ್ಥಳದಲ್ಲೇ ಉಪಸ್ಥಿತರಿದ್ದರು.
SCROLL FOR NEXT