ರಾಜ್ಯ

ವಿಷ ಪ್ರಸಾದ ದುರಂತ: ಸಾಲೂರು ಮಠದ ಸ್ವಾಮೀಜಿ ಇಮ್ಮಡಿ ಮಹದೇವಸ್ವಾಮಿ ಸೇರಿ ನಾಲ್ವರ ಬಂಧನ

Srinivasamurthy VN
ಚಾಮರಾಜನಗರ: ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದ್ದ ಮತ್ತು 15 ಜನರ ಸಾವಿಗೆ ಕಾರಣವಾಗಿದ್ದ ಸುಳ್ವಾಡಿ ಮಾರಮ್ಮ ದೇಗುಲದ ವಿಷ ಪ್ರಸಾದ ದುರಂತ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ನಾಲ್ಕು ಪ್ರಮುಖ ಆರೋಪಿಗಳನ್ನು ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ.
ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದ ಚಾಮರಾಜನಗರ ಪೊಲೀಸರು ಇದೀಗ ನಾಲ್ಕು ಮಂದಿ ಪ್ರಮುಖ ಆರೋಪಿಗಳನ್ನು ಬಂಧಿಸಿದ್ದಾರೆ. ಈ ಪೈಕಿ ಟ್ರಸ್ಟ್ ಅಧ್ಯಕ್ಷ ಹಾಗೂ ಮಠದ ಕಿರಿ ಸ್ವಾಮಿ ಇಮ್ಮಡಿ ಮಹದೇವಸ್ವಾಮೀಜಿ, ವ್ಯವಸ್ಥಾಪಕ ಮಾದೇಶ್, ಮಾದೇಶನ ಪತ್ನಿ ಅಂಬಿಕಾ, ನಾಗದೇವತೆ ದೇವಾಲಯದ ಅರ್ಚಕ ದೊಡ್ಡಯ್ಯ ಎಂಬುವವರನ್ನು ಪೊಲೀಸರು ಬಂಧಿಸಿದ್ದಾರೆ. 
ದುರಂತಕ್ಕೆ ಸಂಬಂಧಿಸಿದಂತೆ ಪೊಲೀಸ್ ತನಿಖೆ ಅಂತಿಮ ಘಟ್ಟ ತಲುಪಿದೆ. ಇಂದು ಪೊಲೀಸರು ಆರೋಪಿಗಳನ್ನು ಕೊಳ್ಳೇಗಾಲ ನ್ಯಾಯಾಲಯಕ್ಕೆ ಹಾಜರುಪಡಿಸಲಿದ್ದಾರೆ. ಆರೋಪಿಗಳನ್ನ ಕೋರ್ಟ್​​ಗೆ ಹಾಜರುಪಡಿಸಲಿರುವ ಹಿನ್ನೆಲೆಯಲ್ಲಿ ಕೊಳ್ಳೇಗಾಲ ಡಿವೈಎಸ್​ಪಿ ಕಚೇರಿ ಮುಂದೆ ಜನಜಂಗುಳಿ ಕುತೂಹಲದಿಂದ ಕಾಯುತ್ತಿದೆ. ಡಿವೈಎಸ್​ಪಿ ಕಚೇರಿ ಹಾಗು ನ್ಯಾಯಾಲಯದ ಸುತ್ತಮುತ್ತ ವ್ಯಾಪಕ ಪೊಲೀಸ್ ಭದ್ರತೆ ಏರ್ಪಡಿಸಲಾಗಿದೆ.
ಇನ್ನು ಆರೋಪಿಗಳನ್ನು ರಕ್ಷಿಸಲು ರಾಜಕೀಯ ಒತ್ತಡ ಹಾಕಲಾಗ್ತಿದೆ ಅಂತ ಸ್ಥಳೀಯರು ಆರೋಪ ಮಾಡಿದ್ದಾರೆ. ಯಾವುದೇ ಒತ್ತಡಕ್ಕೂ ಮಣಿಯದೆ ಆರೋಪಿಗಳನ್ನು ಬಂಧಿಸುವಂತೆ ಜನರು ಆಗ್ರಹಿಸಿದ್ದಾರೆ.
SCROLL FOR NEXT