ಬೆಂಗಳೂರು: ಕಿಲ್ಲರ್ ಎಂದೇ ಕುಖ್ಯಾತಿ ಪಡೆದಿರುವ ಬಿಎಂಟಿಸಿ ಬಸ್ ಗೆ ಬುಧವಾರ ಮತ್ತೊಂದು ಬಲಿಯಾಗಿದ್ದು, ಕೇವಲ 24 ಗಂಟೆಗಳ ಅವಧಿಯಲ್ಲಿ ಒಟ್ಟು ಮೂರು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.
ಬಿಎಂಟಿಸಿ ಬಸ್ ಅಪಘಾತದಲ್ಲಿ ನಿನ್ನೆ ಇಬ್ಬರು ವಿದ್ಯಾರ್ಥಿಗಳು ಸಾವನ್ನಪ್ಪಿದ ಬೆನ್ನಲ್ಲೇ ಬೆಂಗಳೂರಿನಲ್ಲಿ ಇಂದು ಮತ್ತೊಂದು ಬಸ್ ಅಪಘಾತ ಸಂಭವಿಸಿದೆ. KA-53-F-020 ನಂಬರ್ ನ ಬಿಎಂಟಿಸಿ ಬಸ್ ಡಿಕ್ಕಿಯಾದ ಪರಿಣಾಮ ಬೈಕ್ ಸವಾರ ನೋಮನ್ ನೌಷಾದ್ (24) ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.
ಕೆ.ಆರ್.ಪುರದ ನಾರಾಯಣಪುರ ಬಸ್ ನಿಲ್ದಾಣದ ಬಳಿ ಈ ಘಟನೆ ನಡೆದಿದ್ದು, ಬಿಎಂಟಿಸಿ ಚಾಲಕನ ಅತಿ ವೇಗದ ಚಾಲನೆಯೇ ಅಫಘಾತಕ್ಕೆ ಕಾರಣ ಎಂದು ಹೇಳಲಾಗಿದೆ. ಮೃತ ನೋಮನ್ ನೌಷಾದ್ ವೈಟ್ ಫೀಲ್ಡ್‌ನಲ್ಲಿ ಸಾಫ್ಟ್ ವೇರ್ ಇಂಜಿನಿಯರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ ಎಂದು ತಿಳಿದುಬಂದಿದೆ. ಈ ಕುರಿತು ಕೆ.ಆರ್.ಪುರಂ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.