ರಾಜ್ಯ

ತೀವ್ರ ಗದ್ದಲದ ನಡುವೆಯೇ ಚರ್ಚೆಗಳಿಲ್ಲದೆ ಮಸೂದೆಗಳು ಅಂಗೀಕಾರ

Manjula VN

ಬೆಳಗಾವಿ: ಉತ್ತರ ಕರ್ನಾಟಕದ ವಿವಿಧ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಲು ಅವಕಾಶ ನೀಡಬೇಕೆಂದು ಪ್ರತಿಪಕ್ಷ ಬಿಜೆಪಿ ಶುಕ್ರವಾರವೂ ಮುಂದುವರೆಸಿದ ಧರಣಿ, ಘೋಷಣೆಗಳ ನಡುವೆಯೇ ಸರ್ಕಾರ ಲಿಖಿತ ಉತ್ತರಗಳ ಸಲ್ಲಿಕೆ, ವಿವಿಧ ವಿಧೇಯಕಗಳನ್ನು ಮಂಡಿಸಿ ಯಾವುದೇ ಚರ್ಚೆಗಳಿಲ್ಲದೆಯೇ ಒಪ್ಪಿಗೆ ಪಡೆಯಿತು.

ಕಲಾಪ ಆರಂಭವಾಗುತ್ತಿದ್ದಂತೆಯೇ ಬಿಜೆಪಿ ಸದಸ್ಯರು ಸಭಾಪತಿಗಳ ಎದುರು ನಿಂತು ಘೋಷಣೆ ಕೂಗುತ್ತಾ ಧರಣಿ ಆರಂಭಿಸಿದರು. ಉತ್ತರ ಕರ್ನಾಟಕ, ರೈತರು ಹಾಗೂ ನೀರಾವರಿ ವಿರೋಧಿ ಸರ್ಕಾರಕ್ಕೆ ಧಿಕ್ಕಾರ ಎಂದು ಘೋಷಣೆಗಳನ್ನು ಕೂಗಿದರು.

ಇದಕ್ಕೆ ಪ್ರತಿಯಾಗಿ ಕಾಂಗ್ರೆಸ್ ಕೆಲವು ಸದಸ್ಯರು ಘೋಷಣೆ ಕೂಗಿದರು, ಕೆಲ ನಿಮಿಷಗಳ ಕಾಲ ನಂತರ ಸಭಾಪತಿ ಪ್ರತಾಪಚಂದ್ರಶೆಟ್ಟಿ 12 ಗಂಟೆವರೆಗೆ ಕಲಾಪ ಮುಂದೂಡಿದರು. ಮಧ್ಯಾಹ್ನ 12.15ಕ್ಕೆ ಕಲಾಪ ಆರಂಭವಾಗುತ್ತಿದ್ದಂತೆ ಬಿಜೆಪಿ ಸದಸ್ಯರು ಸಭಾಪತಿಗಳ ಮುಂದೆ ಬಂದು ಘೋಷಣೆ ಕೂಗುತ್ತಾ ಧರಣೆ ಮುಂದುವರೆಸಿದರು.

ನಂತರ ಕಾನೂನು ಸಚಿವ ಕೃಷ್ಣ ಬೈರೇಗೌಡ ಅವರು, ಕೆಳಮನೆಯಲ್ಲಿ ಅಂಗೀಕೃತವಾಗಿರುವ ಕರ್ನಾಟಕ ವಿಧಾನಮಂಡಲ (ಅನರ್ಹತಾ ನಿವಾರಣಾ) (ತಿದ್ದುಪಡಿ) ವಿಧೇಯಕ 2018 ಮಂಡಿಸಿದರೆ, ಮುಖ್ಯಂತ್ರಿ ಕುಮಾರಸ್ವಾಮಿಯವರು ಕೆಳಮನೆಯಲ್ಲಿ ಅಂಗೀಕಾರವಾಗಿರುವ ಕರ್ನಾಟಕ ಸಿವಿಲ್ ಸೇವೆಗಳ (ನೇಮಕಾತಿ ಸಮಯದಲ್ಲಿ ಅಭ್ಯರ್ಥಿಗಳ ಆಯ್ಕೆ ವಿಧಾನ) ವಿಧೇಯಕ-2018 ಮಂಡಿಸಿ, ಧ್ವನಿ ಮತದಿಂದ ಒಪ್ಪಿಗೆ ಪಡೆದರು. ನಂತರ ಸಭಾಪತಿಗಳು ಕಲಾಪವನ್ನು ಅನಿರ್ದಿಷ್ಟಾವಧಿಗೆ ಮುಂದೂಡಿದರು.

SCROLL FOR NEXT