ರಾಜ್ಯ

ಸಿಆರ್ ಪಿಎಫ್ ಅಧಿಕಾರಿಯ ನಾಯಿ ಕಡಿತ: ಪೊಲೀಸರಿಗೆ ದೂರು ನೀಡಿದ ಪ್ರೊಫೆಸರ್

Sumana Upadhyaya

ಬೆಂಗಳೂರು: ನಗರದ ಖಾಸಗಿ ಕಾಲೇಜಿನಲ್ಲಿ ಪ್ರೊಫೆಸರ್ ಆಗಿರುವ ಮತ್ತು ಕೇಂದ್ರ ಮೀಸಲು ಪೊಲೀಸ್ ಪಡೆಯ ಇನ್ಸ್ ಪೆಕ್ಟರ್ ಪತ್ನಿಯೂ ಆಗಿರುವ ನೇಹಾ ಜೈನ್ ಅವರ ಮೇಲೆ ಸಿಆರ್ ಪಿಎಫ್ ನ ಉಪ ಕಮಾಂಡೆಂಟ್ ಅವರಿಗೆ ಸೇರಿದ ಜರ್ಮನ್ ಶೆಫರ್ಡ್ ನಾಯಿ ಕಚ್ಚಿ ಗಾಯಗೊಂಡಿದ್ದಾರೆ. ಯಲಹಂಕದಲ್ಲಿರುವ ಸಿಆರ್ ಪಿಎಫ್ ಕ್ಯಾಂಪಸ್ ನಲ್ಲಿ ಈ ಘಟನೆ ನಡೆದಿದೆ.

ಗಾಯಗೊಂಡ ನೇಹಾ ಜೈನ್ ಅವರಿಗೆ ಕಾಲು ಮತ್ತು ಹೊಟ್ಟೆಯ ಬಳಿ ಏಳು ಹೊಲಿಗೆಗಳನ್ನು ಹಾಕಲಾಗಿದೆ.

ಕಳೆದ ಡಿಸೆಂಬರ್ 16ರಂದು ಈ ಘಟನೆ ನಡೆದಿತ್ತು. ನೇಹಾ ಅವರು ತಮ್ಮ ನಾಯಿಯೊಂದಿಗೆ ಸಂಜೆ ವಿಹಾರ ಮಾಡುತ್ತಿದ್ದಾಗ ಉಪ ಕಮಾಂಡೆಂಟ್ ರಮೇಶ್ ಕುಮಾರ್ ಅವರಿಗೆ ಸೇರಿದ ಜರ್ಮನ್ ಶೆಫರ್ಡ್ ನಾಯಿ ಅವರ ಮೇಲೆ ಏಕಾಏಕಿ ದಾಳಿ ನಡೆಸಿತು.

ಈ ಸಂದರ್ಭದಲ್ಲಿ ರಮೇಶ್ ಅವರು ಪಕ್ಕದಲ್ಲಿಯೇ ಹೋಗುತ್ತಿದ್ದರೂ ಕೂಡ ನಾಯಿಯನ್ನು ತಡೆಯಲಿಲ್ಲ. ಅಲ್ಲದೆ ಘಟನೆಯನ್ನು ಮುಚ್ಚಿ ಹಾಕುವಂತೆ ಬೆದರಿಕೆಯೊಡ್ಡಿದ್ದಾರೆ ಎಂದು ನೇಹಾ ಕುಟುಂಬಸ್ಥಪು ಯಲಹಂಕ ನ್ಯೂ ಟೌನ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಗಂಭೀರ ಗಾಯಗೊಂಡಿದ್ದರಿಂದ ನೇಹಾ ಆಸ್ಪತ್ರೆಗೆ ದಾಖಲಾಗಿದ್ದು ಕಳೆದ 28ರಂದು ಬಿಡುಗಡೆಗೊಂಡಿದ್ದರು. ನಂತರ ಅವರ ಕುಟುಂಬಸ್ಥರು ಪೊಲೀಸರಿಗೆ ದೂರು ನೀಡಿದ್ದಾರೆ.

ಭಾರತೀಯ ದಂಡ ಸಂಹಿತೆ ಸೆಕ್ಷನ್ 289ರಡಿ ಕೇಸು ದಾಖಲಾಗಿದೆ. ಈ ಬಗ್ಗೆ ತನಿಖೆ ನಡೆಸಲು ಪೊಲೀಸರ ತಂಡ ನಿನ್ನೆ ಸಿಆರ್ ಪಿಎಫ್ ಕ್ಯಾಂಪಸ್ ಗೆ ಭೇಟಿ ನೀಡಿತ್ತು.

SCROLL FOR NEXT