ಬೆಂಗಳೂರು: ಪ್ರವಾಸಿಗರ ಆಕರ್ಷಣೀಯ ತಾಣವಾಗಿರುವ ಕರ್ನಾಟಕದ ನಂದಿಬೆಟ್ಟ, ಮಧುಗಿರಿ, ಯಾದಗಿರಿ ಬೆಟ್ಟದಲ್ಲಿ ಶೀಘ್ರ ಕೇಬಲ್ ಕಾರ್ ಅಥವಾ ರೋಪ್ ವೇ ಮಾರ್ಗ ಕಾರ್ಯಾರಂಭ ಮಾಡುವ ಸಾಧ್ಯತೆ ಇದೆ.
ಈ ಬಗ್ಗೆ ಕೇಂದ್ರ ಸರ್ಕಾರ ತನ್ನ ಬಜೆಟ್ ನಲ್ಲಿ ಘೋಷಣೆ ಮಾಡಿದ್ದು, ದೇಶದ ಪ್ರವಾಸೋಧ್ಯಮ ಉತ್ತೇಜನಕ್ಕಾಗಿ ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ರೋಪ್ ವೇ ಯೋಜನೆ ಘೋಷಣೆ ಮಾಡಿದ್ದಾರೆ. ಕೇಂದ್ರ ಸರ್ಕಾರದ ಈ ಮಹತ್ವಾಕಾಂಕ್ಷಿ ಯೋಜನೆ ಅನ್ವಯ ದೇಶದ ಪ್ರಮುಖ ಪ್ರವಾಸಿ ತಾಣಗಳಲ್ಲಿ ಕೇಬಲ್ ಕಾರ್ ಅಥವಾ ರೋಪ್ ವೇ ಅಳವಡಿಸಲು ನಿಧಿ ಮೀಸಲಿರಿಸಲಾಗಿದೆ. ಈ ಯೋಜನೆ ಅನ್ವಯ ಕರ್ನಾಟಕದ ನಂದಿಬೆಟ್ಟ, ಮಧುಗಿರಿ, ಯಾದಗಿರಿ ಬೆಟ್ಟಗಳಲ್ಲಿ ಶೀಘ್ರ ರೋಪ್ ವೇ ಕಾಮಗಾರಿ ಆರಂಭವಾಗುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ.
ಈ ಹಿಂದೆಯೇ ರಾಜ್ಯ ಸರ್ಕಾರ ಚಿಕ್ಕಬಳ್ಳಾಪುರದಲ್ಲಿರುವ ನಂದಿ ಗಿರಿಧಾಮ, ತುಮಕೂರಿನ ಮಧುಗಿರಿ ಬೆಟ್ಟ ಮತ್ತು ಯಾದಗಿರಿಯಲ್ಲಿರುವ ಯಾದಗಿರಿ ಬೆಟ್ಟಗಳಲ್ಲಿ ಕೇಬಲ್ ಕಾರ್ ಅಳವಡಿಸುವ ಕುರಿತು ಚಿಂತನೆಯಲ್ಲಿ ತೊಡಗಿತ್ತು. ಆದರೆ ಇದಕ್ಕೆ ಕೇಂದ್ರ ಸರ್ಕಾರದ ಅನುಮೋದನೆ ಬೇಕಿದ್ದರಿಂದ ಅದು ಸಾಕಾರವಾಗಿರಲಿಲ್ಲ. ಇದೀಗ ಕೇಂದ್ರ ಸರ್ಕಾರದ ಯೋಜನೆಯೊಂದಿಗೆ ನೆನೆಗುದಿಗೆ ಬಿದ್ದಿದ್ದ ಈ ಯೋಜನೆಗೆ ಮತ್ತೆ ಜೀವ ಬಂದಂತಾಗಿದೆ. ಅಲ್ಲದೆ ಕೇಂದ್ರದ ನೆರವಿನಿಂದ ಯೋಜನೆ ವೇಗ ಪಡೆದುಕೊಳ್ಳಲ್ಲಿದ್ದು, ಶೀಘ್ರ ಈ ಪ್ರವಾಸಿ ತಾಣಗಳಲ್ಲಿ ರೋಪ್ ವೇ ಕಾಮಗಾರಿ ಆರಂಭವಾಗಲಿದೆ.
ಈ ಬಗ್ಗೆ ಮಾಹಿತಿ ನೀಡಿರುವ ರಾಜ್ಯ ಪ್ರವಾಸೋಧ್ಯಮ ಇಲಾಖೆಯ ನಿರ್ದೇಶಕಿ ಎನ್ ಮಂಜುಳಾ ಅವರು, ಪೈಪ್ ಲೈನ್ ಮೂಲಕ ಮೂರು ರೋಪ್ ವೇ ಅಳವಡಿಸುವ ಕುರಿತು ಚರ್ಚೆ ನಡೆದಿದೆ. ಈ ಪೈಕಿ ಮಧುಗಿರಿ ಮತ್ತು ನಂದಿ ಗಿರಿಧಾಮದ ಎರಡು ರೋಪ್ ವೇ ಕಾಮಗಾರಿಗಳು ಪುರಾತತ್ವ ಇಲಾಖೆ ಅಡಿಯಲ್ಲಿ ಬರುತ್ತದೆ. ರೋಪ್ ವೇ ಕಾಮಗಾರಿಗೆ ಈ ಹಿಂದೆಯೇ ಅನುಮೋದನೆ ಕೇಳಲಾಗಿತ್ತು. ಆದರೆ ಈ ಬಾರಿ ಸ್ವತಃ ಕೇಂದ್ರ ಸರ್ಕಾರವೇ ಯೋಜನೆ ಘೋಷಣೆ ಮಾಡಿರುವುದರಿಂದ ಕರ್ನಾಟಕದ ಯೋಜನೆಗಳಿಗೆ ಶೀಘ್ರ ಅನುಮೋದನೆ ಸಿಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಪ್ರವಾಸಿ ಕ್ಷೇತ್ರಗಳ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡುವ ಉದ್ದೇಶದೊಂದಿಗೆ ಎರಡು ವಿಶೇಷ ಪ್ರವಾಸಿ ವಲಯಗಳು ಅಭಿವೃದ್ಧಿಯಾಗಲಿವೆ. ಪ್ರವಾಸಿ ಕ್ಷೇತ್ರಗಳಲ್ಲಿ ಅಗತ್ಯ ಮೂಲಸೌಕರ್ಯಗಳ ಅಭಿವೃದ್ಧಿಗಾಗಿ ಖಾಸಗಿ ಹೂಡಿಕೆದಾರರ ನೆರವು ಪಡೆಯಲು ಕೇಂದ್ರ ಸರ್ಕಾರ ಉದ್ದೇಶಿಸಿದೆ. ಭಾರತೀಯ ಪುರಾತತ್ವ ಸಂಸ್ಥೆಯ 100 ಆದರ್ಶ ಸ್ಮಾರಕಗಳನ್ನು ಗುರುತಿಸಿ, ಮೇಲ್ದರ್ಜೆಗೇರಿಸಲು ಕ್ರಮ ಕೈಗೊಳ್ಳಲಾಗುತ್ತದೆ. ಪ್ರವಾಸಿ ಕ್ಷೇತ್ರಗಳ ಅಭಿವೃದ್ಧಿಗಾಗಿ 13 ಹೊಸ ಯೋಜನೆಗಳನ್ನೂ ಮುಂದಿನ ದಿನಗಳಲ್ಲಿ ಘೋಷಣೆ ಮಾಡಲಾಗುತ್ತದೆ ಎಂದು ಬಜೆಟ್ ನಲ್ಲಿ ಘೋಷಣೆ ಮಾಡಲಾಗಿದೆ. ಅಲ್ಲದೆ 3 ಪಾರಂಪರಿಕ ತಾಣಗಳಲ್ಲಿ ಮೂಲಸೌಕರ್ಯ ಹಾಗೂ ಇನ್ನಿತರ ಅವಶ್ಯ ಕಾರ್ಯಕ್ರಮಗಳು ಅನುಷ್ಠಾನಕ್ಕೆ ಬರಲಿವೆ. 2014 ರಿಂದ 2017ರ ಅವಧಿಯಲ್ಲಿ ಪ್ರವಾಸಿ ಕ್ಷೇತ್ರದ ಅಭಿವೃದ್ಧಿಗಾಗಿ ಹಮ್ಮಿಕೊಳ್ಳಲಾದ ವಿವಿಧ ಕಾರ್ಯಕ್ರಮ ಪೂರ್ಣಗೊಳಿಸಲು ಆದ್ಯತೆ ನೀಡಲಾಗಿದೆ. ಪ್ರವಾಸಿಗರನ್ನು ಆಕರ್ಷಿಸುವುದರ ಜತೆಗೆ, ಪ್ರವಾಸಿ ಕ್ಷೇತ್ರದ ಒಟ್ಟು ಆದಾಯ ಹೆಚ್ಚಳಕ್ಕೆ ಕಾರ್ಯಕ್ರಮ ರೂಪಿಸಲು ಉದ್ದೇಶಿಸಲಾಗಿದೆ. ಪ್ರವಾಸಿ ಕ್ಷೇತ್ರಗಳಲ್ಲಿ ಯಾತ್ರಿಕರಿಗೆ ಅಗತ್ಯ ಮಾಹಿತಿ, ಕ್ಷೇತ್ರಗಳಲ್ಲಿ ಹೆಚ್ಚು ಉದ್ಯೋಗ ಸೃಷ್ಟಿ ಸೇರಿ ಸಮಗ್ರ ಅಭಿವೃದ್ಧಿಗೆ ಯೋಜನೆ ರೂಪಿಸಲು ಬಜೆಟ್ನಲ್ಲಿ ಪ್ರಸ್ತಾಪಿಸಲಾಗಿದೆ.
ಗಡಿ ಪ್ರವಾಸಕ್ಕೆ ಒತ್ತು
ಗಡಿ ಭಾಗದಲ್ಲಿರುವ ಪ್ರವಾಸಿ ತಾಣಗಳಿಗೆ ಅಗತ್ಯ ರಸ್ತೆ ಸಂಪರ್ಕ ಕಲ್ಪಿಸುವ ಉದ್ದೇಶದಿಂದಲೇ ರೋಹ್ಟಂಗ್ ಸುರಂಗ ನಿರ್ವಿುಸಲಾಗಿದೆ. ಇದರಿಂದ ಲೇಹ್ ಲದಾಖ್ ಭಾಗವನ್ನು ಸಾರ್ವಕಾಲಿಕ ಪ್ರವಾಸಿ ಪ್ರದೇಶವನ್ನಾಗಿ ಮಾರ್ಪಡಿಸಲಾಗಿದೆ. ಜೋಜಿಲಾ ಪಾಸ್ನಲ್ಲೂ 14 ಕಿ.ಮೀ ಉದ್ದದ ಸುರಂಗ ಮಾರ್ಗ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದೆ.