ರಾಜ್ಯ

ಮಹದಾಯಿ ವಿವಾದ: ಕನ್ನಡಪರ ಸಂಘಟನೆಗಳಿಂದ ಅರಮನೆ ಮೈದಾನಕ್ಕೆ ಪ್ರತಿಭಟನಾ ರ್ಯಾಲಿ

Sumana Upadhyaya
ಬೆಂಗಳೂರು: ಮಹದಾಯಿ ಜಲ ವಿವಾದ ಬಗೆಹರಿಸಲು ಪ್ರಧಾನಿ ಮೋದಿಯವರು ಮಧ್ಯಸ್ಥಿಕೆ ವಹಿಸಬೇಕೆಂದು ಒತ್ತಾಯಿಸಿ ವಿವಿಧ ಕನ್ನಡಪರ ಸಂಘಟನೆಗಳು ಇಂದು ಕರಾಳ ದಿನ ಹಮ್ಮಿಕೊಂಡಿವೆ.
ಈ ಪ್ರಯುಕ್ತ ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನವನದಲ್ಲಿ ಜಮಾಯಿಸಿರುವ ವಿವಿಧ ಕನ್ನಡಪರ ಸಂಘಟನೆಗಳ ಕಾರ್ಯಕರ್ತರು ಇಂದು ಬೆಳಗ್ಗೆ 11 ಗಂಟೆಗೆ ಬಿಜೆಪಿಯ ಪರಿವರ್ತನಾ ರ್ಯಾಲಿ ಸಮಾವೇಶ ನಡೆಯುವ ಅರಮನೆ ಮೈದಾನದವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಲಿದ್ದಾರೆ. ಇದರ ನೇತೃತ್ವವನ್ನು ಡಾ. ರಾಜ್ ಕುಮಾರ್ ಅಭಿಮಾನಿಗಳ ಸಂಘ, ಕರ್ನಾಟಕ ರಕ್ಷಣಾ ವೇದಿಕೆ, ಕನ್ನಡ ಜಾಗೃತಿ ವೇದಿಕೆಗಳು ಹಮ್ಮಿಕೊಂಡಿವೆ. 
ಮಹದಾಯಿ ವಿಚಾರವಾಗಿ ಪ್ರಧಾನಿ ಮೋದಿ ಮತ್ತು ಬಿಜೆಪಿ ನಾಯಕರ ನಿರ್ಲಕ್ಷ್ಯ ಧೋರಣೆ ಖಂಡಿಸಿ ಕರಾಳ ದಿನಾಚರಣೆ ನಡೆಸಲಾಗುವುದು ಎಂದು ವಾಟಾಳ್ ನಾಗರಾಜ್ ತಿಳಿಸಿದ್ದಾರೆ. ಪ್ರತಿಭಟನೆಯಲ್ಲಿ ನಾಡಿನ ಪ್ರಮುಖ ಸಾಹಿತಿಗಳು, ಕನ್ನಡಪರ ಹೋರಾಟಗಾರರು ಭಾಗವಹಿಸುತ್ತಿದ್ದಾರೆ.
ಸ್ವಾತಂತ್ರ್ಯ ಉದ್ಯಾನವನದಲ್ಲಿ ಮಾತ್ರ ಪ್ರತಿಭಟನೆ ಮಾಡಲು ಅವಕಾಶ ನೀಡಲಾಗಿದ್ದು ಅದನ್ನು ಹೊರತುಪಡಿಸಿ ಮೆರವಣಿಗೆ ಹೊರಟರೆ ಮುಂಜಾಗ್ರತಾ ಕ್ರಮವಾಗಿ ಪ್ರತಿಭಟನಾಕಾರರನ್ನು ವಶಕ್ಕೆ ಪಡೆಯಲಾಗುವುದು ಎಂದು ಪಶ್ಚಿಮ ವಿಭಾಗ ಡಿಸಿಪಿ ಎಂ.ಎನ್. ಅನುಚೇತ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.
SCROLL FOR NEXT