ರಾಜ್ಯ

ರಾಜ್ಯಪಾಲರಿಲ್ಲ, ಸಚಿವರಿಲ್ಲ, ಚಿನ್ನದ ಪದಕವಿಲ್ಲ: ಇದು ಬೆಂಗಳೂರು ವಿ.ವಿ ಘಟಿಕೋತ್ಸವದ ದುಃಸ್ಥಿತಿ

Sumana Upadhyaya
ಬೆಂಗಳೂರು: ವಿಶ್ವವಿದ್ಯಾಲಯದ ಕುಲಪತಿಗಳಾದ ರಾಜ್ಯಪಾಲರಾಗಲಿ, ಉನ್ನತ ಶಿಕ್ಷಣ ಸಚಿವರಾಗಲಿ ಆ ಕಾರ್ಯಕ್ರಮದಲ್ಲಿ ಇರಲಿಲ್ಲ. ಕಳೆದೊಂದು ವರ್ಷದಿಂದ ವಿಶ್ವವಿದ್ಯಾಲಯದ ಉಪಕುಲಪತಿ ಹುದ್ದೆ ಖಾಲಿ ಇರುವುದರಿಂದ ಕಾರ್ಯಕ್ರಮದಲ್ಲಿ ಭಾಗವಹಿಸಬೇಕಾದ ಮುಖ್ಯ ಅತಿಥಿಗಳು ಯಾರೂ ಕೂಡ ಅಲ್ಲಿ ಇರಲಿಲ್ಲ. ವಿದ್ಯಾರ್ಥಿಗಳಿಗಂತೂ ಬೇಸರ ತರಿಸಿತು. ಇದು ನಿನ್ನೆ ಕಳೆದ ಬೆಂಗಳೂರು ವಿಶ್ವವಿದ್ಯಾಲಯದ 53ನೇ ಘಟಿಕೋತ್ಸವದ ಪರಿಸ್ಥಿತಿ.
ಘಟಿಕೋತ್ಸವದಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿಗಳಿಗೆ ನಿರಾಸೆಯುಂಟಾಗಲು ಇವೆಷ್ಟೇ ಕಾರಣಗಳಲ್ಲ. ರ್ಯಾಂಕ್ ಬಂದವರಿಗೆ ಚಿನ್ನದ ಪದಕ ಕೂಡ ನೀಡದೆ ಕೇವಲ ನಗದು ಬಹುಮಾನ ಮತ್ತು ಪ್ರಮಾಣಪತ್ರವನ್ನು ನೀಡಿ ಸನ್ಮಾನಿಸಿದರು. ಇದಕ್ಕೆ ಮತ್ತೊಂದು ಪ್ರಮಾದವೆಂಬಂತೆ ಹಲವು ಪ್ರಮಾಣಪತ್ರಗಳಲ್ಲಿ ತಪ್ಪಾಗಿ ಪ್ರಕಟವಾಗಿತ್ತು. ಉತ್ತಮ ಕ್ರೀಡಾಪಟುವಿಗೆ ಬಿ.ಕಾಂನಲ್ಲಿ ಅತಿ ಹೆಚ್ಚು ಅಂಕ ಗಳಿಸಿದವರ ಪ್ರಮಾಣಪತ್ರವನ್ನು ನೀಡಲಾಗಿತ್ತು.
ಬೆಂಗಳೂರು ವಿಶ್ವವಿದ್ಯಾಲಯದ 53 ವರ್ಷಗಳ ಘಟಿಕೋತ್ಸವ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಕುಲಪತಿ ಮತ್ತು ಉಪಕುಲಪತಿ ಇಬ್ಬರೂ ಇರಲಿಲ್ಲ. ಎರಡು ತಿಂಗಳ ಹಿಂದೆಯೇ ವಿಶ್ವವಿದ್ಯಾಲಯದ ಘಟಿಕೋತ್ಸವ ಕಾರ್ಯಕ್ರಮ ದಿನಾಂಕವನ್ನು ನಿಗದಿಪಡಿಸಲಾಗುತ್ತದೆ. 
'ಮೊನ್ನೆ ಬುಧವಾರ ಸಾಯಂಕಾಲ ರಾಜಭವನದಿಂದ ನಮಗೆ ಅಧಿಕೃತ ಮಾಹಿತಿ ಬಂದಿತು. ಅನಿವಾರ್ಯ ಕಾರಣಗಳಿಂದ ರಾಜ್ಯಪಾಲರಿಗೆ ಘಟಿಕೋತ್ಸವದಲ್ಲಿ ಭಾಗವಹಿಸಲು ಸಾಧ್ಯವಾಗುತ್ತಿಲ್ಲ ಎಂಬ ಮಾಹಿತಿ ಸಿಕ್ಕಿತು' ಎನ್ನುತ್ತಾರೆ ವಿವಿಯ ಅಧಿಕಾರಿಗಳು.
ಆದರೆ ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರೆಡ್ಡಿಯವರು ನೀಡಿದ್ದ ಕಾರಣ ವಿವಿಯ ಅಧಿಕಾರಿಗಳಿಗೆ ನಿಜಕ್ಕೂ ಬೇಸರವನ್ನುಂಟುಮಾಡಿದೆ. ನಿನ್ನೆ ಘಟಿಕೋತ್ಸವ ಆರಂಭಕ್ಕೆ ಸ್ವಲ್ಪ ಹೊತ್ತಿಗೆ ಮುಂಚೆ ಸಚಿವರು ಕರೆ ಮಾಡಿ, ರಾಹುಲ್ ಗಾಂಧಿ ಭೇಟಿ ಹಿನ್ನೆಲೆಯಲ್ಲಿ ಕಾರ್ಯಕ್ರಮದ ತಯಾರಿ ನೋಡಲು ಕೊಪ್ಪಳಕ್ಕೆ ಹೋಗಬೇಕಾಗಿರುವುದರಿಂದ ಬರಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿದರು ಎನ್ನುತ್ತಾರೆ.
ವಿಶ್ವವಿದ್ಯಾಲಯಕ್ಕೆ ಉಪಕುಲಪತಿಗಳ ನೇಮಕ ವಿಳಂಬದ ಕುರಿತು ಮಾಧ್ಯಮ ಪ್ರತಿನಿಧಿಗಳಿಂದ ಪ್ರಶ್ನೆ ಎದುರಾಗಬಹುದು ಎಂದು ತಪ್ಪಿಸಿಕೊಳ್ಳಲು ಸಚಿವರು ಕಾರ್ಯಕ್ರಮಕ್ಕೆ ಗೈರುಹಾಜರಾದರು ಎಂದು ಹೇಳಲಾಗುತ್ತಿದೆ.
ರಾಜ್ಯಪಾಲರು ಬೆಂಗಳೂರಿನಲ್ಲಿ ಇಲ್ಲ ಎಂಬ ಮಾಹಿತಿ ರಾಜಭವನವನ್ನು ಸಂಪರ್ಕಿಸಿದಾಗ ತಿಳಿಯಿತು. ಈ ಬಗ್ಗೆ ಉನ್ನತ ಶಿಕ್ಷಣ ಸಚಿವರು ಪ್ರತಿಕ್ರಿಯೆಗೆ ಸಿಗಲಿಲ್ಲ. 
ಘಟಿಕೋತ್ಸವದಲ್ಲಿ ರಾಜ್ಯಪಾಲರು ಮತ್ತು ಸಚಿವರು ಇಬ್ಬರೂ ಇಲ್ಲದ್ದು ಬೇಸರ ತರಿಸಿತು ಎನ್ನುತ್ತಾರೆ ಎಂ.ಎಸ್ಸಿ ಎಲೆಕ್ಟ್ರಾನಿಕ್ಸ್ ಸೈನ್ಸ್ ನಲ್ಲಿ ಮೊದಲ ರ್ಯಾಂಕ್ ಪಡೆದ ರಾಕೇಶ್ ರೋಶನ್.
SCROLL FOR NEXT