ಬೆಂಗಳೂರು: ತಡವಾಗಿ ಶುಲ್ಕ ಕಟ್ಟುವವಟರಿಗೆ ದಂಡ ಹಾಕುವ ಖಾಸಗಿ ಶಾಲೆಗಳಿಗೆ ಅಂಕುಶ ಹಾಕಲು ಸರ್ಕಾರ ಮುಂದಾಗಿದೆ.
ಖಾಸಗಿ ಶಿಕ್ಷಣ ಸಂಸ್ಥೆಗಳು ಡೊನೇಶನ್, ಕಟ್ಟಡ ನಿರ್ಮಾಣ ಹೆಸರಿನಲ್ಲಿ ಶುಲ್ಕ ಪಾವತಿ ವಿಳಂಬಕ್ಕೆ ದಂಡ ವಿಧಿಸುವುದನ್ನು ತಡೆಯಲು ಹಾಲಿ ಇರುವ ಕಾಯ್ದೆಗೆ ತಿದ್ದುಪಡಿ ತರಲಾಗುತ್ತದೆ ಎಂದು ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವ ತನ್ವೀರ್ ಸೇಠ್ ಅವರು ಶುಕ್ರವಾರ ಹೇಳಿದ್ದಾರೆ.
ಪ್ರಶ್ನೋತ್ತರ ವೇಳೆ ಕಾಂಗ್ರೆಸ್'ನ ಪಿ.ಆರ್. ರಮೇಶ್ ಅವರು ಪ್ರಶ್ನೆಯೊಂದನ್ನು ಸರ್ಕಾರಕ್ಕೆ ಕೇಳಿದ್ದರು. ರಾಜ್ಯದಲ್ಲಿರುವ ಕೆಲ ಶಾಲೆಗಳು ಶುಲ್ಕ ಪಾವತಿ ವಿಳಂಬ ಮಾಡಿದ್ದಕ್ಕೆ ದಂಡವನ್ನು ವಿಧಿಸುತ್ತಿವೆ. ಇದು ಪೋಷಕರ ಮೇಲೆ ಗಂಭೀರ ಪರಿಣಾಮಗಳನ್ನು ಬೀರುತ್ತಿದೆ. ರಾಜ್ಯ ಸರ್ಕಾರ ದೆಹಲಿಯನ್ನು ಅನುಸರಿಸಬೇಕಿದೆ. ಅಲ್ಲಿನ ನ್ಯಾಯಾಲಯದ ಶುಲ್ಕ ಪಾವತಿಗೆ ವಿಳಂಬ ಮಾಡಿದರೆ ದಿನಕ್ಕೆ ರೂ.0.50ಪೈಸೆಯಷ್ಟು ದಂಡವನ್ನು ವಿಧಿಸಬೇಕೆಂದು ತಿಳಿಸಿದೆ ಎಂದು ಹೇಳಿದರು.
ಇದಕ್ಕೆ ಉತ್ತರಿಸಿರುವ ಸಚಿವರು, ಖಾಸಗಿ ಶಾಲೆಗಳಿಗೆ ಕಡಿವಾಣ ಹಾಗಲೂ ಮುಂದಾದಾಗ ನ್ಯಾಯಾಲಯದಲ್ಲಿ ಪ್ರಕರಣ ಬಿದ್ದು ಹೋಗಿದೆ. ರಾಜ್ಯದಲ್ಲಿ ಒಂದು ವ್ಯಾಜ್ಯ ನ್ಯಾಯಾಲಯದ ಅಂಗಳದಲ್ಲಿದೆ. ಇದೇ ರೀತಿಯ ಸಮಸ್ಯೆಗಳನ್ನು ಎದುರಿಸಲು ಪಶ್ಚಿಮ ಬಂಗಾಳ, ಮಹಾರಾಷ್ಟ್ರ, ದೆಹಲಿ ಹಾಗೂ ಗುಜರಾತ್ ಸರ್ಕಾರಗಳು ಪ್ರತ್ಯೇಕ ಮಸೂದೆಯನ್ನು ಪ್ರಸ್ತಾಪಿಸಿತ್ತು. ಆದರೆ, ಮಸೂದೆ ಕುರಿತು ಚರ್ಚೆಗಳು ನಡೆಯುತ್ತಿವೆ.
ಶೀಘ್ರದಲ್ಲಿಯೇ ಕಾಯ್ದೆಗೆ ತಿದ್ದುಪಡಿ ತರಲಾಗುತ್ತದೆ. ಖಾಸಗಿ ಶಾಲೆಗಲಲ್ಲಿ ಅಧಿಕ ಶುಲ್ಕವನ್ನು ಪಡೆಯುತ್ತಿರುವ ದೂರುಗಳಿಗೆ ಸಂಬಂಧಿಸಿದಂತೆ ವಿಚಾರಣೆಯನ್ನು ನಡೆಸಿ ನಿಯಮಾನುಸಾರ ಕ್ರಮ ಕೈಗೊಳ್ಳಲು ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಜಿಲ್ಲಾ ಶಿಕ್ಷಣ ನಿಯಂತ್ರಣ ಪ್ರಾಧಿಕಾರ (ಡೇರಾ) ರಚಿಸಲಾಗಿದೆ. ಸದರಿ ಪ್ರಾಧಿಕಾರವು ವಿಚಾರಣೆ ನಡೆಸಿ ತಪ್ಪಿತಸ್ಥ ಶಾಲೆಗಳ ವಿರುದ್ಧ ಗರಿಷ್ಠ ರೂ.10 ಲಕ್ಷ ಗಳ ದಂಡ ವಿಧಿಸಲು ಅವಕಾಶ ಕಲ್ಪಿಸಲಾಗಿದೆ ಎಂದು ಹೇಳಿದರು.
ಶಾಲೆಗಳು ದಂಡ ವಸೂಲಿ ಮಾಡಿದ ಎರಡು ಪ್ರಕರಣಗಳು ಸರ್ಕಾರದ ಗಮನಕ್ಕೆ ಬಂದಿದ್ದು ಒಂದು ಶಾಲೆಗೆ ನೋಟಿಸ್ ಕಳುಹಿಸಲಾಗಿದೆ. ಮತ್ತೊಂದು ಪ್ರಕರಣ ವಿಚಾರಣೆಯ ಹಂತದಲ್ಲಿದೆ ಎಂದು ತಿಳಿಸಿದ್ದಾರೆ.