ಬೆಂಗಳೂರು: ಟ್ಯಾಂಕ್ ಸ್ವಚ್ಛಗೊಳಿಸುವ ವೇಳೆ ಕಾರ್ಮಿಕರ ಸಾವು, ಇಬ್ಬರು ಪಾಲಿಕೆ ಅಧಿಕಾರಿಗಳ ಬಂಧನ
ಬೆಂಗಳೂರು: ರೆಸ್ಟೋರೆಂಟ್ ವೊಂದರ ಸೆಪ್ಟಿಂಕ್ ಟ್ಯಾಂಕ್ ಸ್ವಚ್ಛಗೊಳಿಸುವ ವೇಳೆ ಇಬ್ಬರು ಕಾರ್ಮಿಕರು ಉಸಿರುಗಟ್ಟಿ ಮೃತಪಟ್ಟ ಘಟನೆ ಸಂಬಂಧ ಬಿಬಿಎಂಪಿಯ ಇಬ್ಬರು ಅಧಿಕಾರಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಬಿಬಿಎಂಪಿ ಹಿರಿಯ ಆರೋಗ್ಯ ನಿರೀಕ್ಷಕ ದೇವರಾಜ್ ಹಾಗೂ ಉಪ ನಿರೀಕ್ಷಕಿ ಕಲ್ಪನಾ ಅವರನ್ನು ಎಚ್‌ಎಎಲ್ ಪೊಲೀಸರು ಬಂಧಿಸಿದ್ದು ಕೊಲೆ ಉದ್ದೇಶವಿಲ್ಲದೆ ಸಂಭವಿಸಿದ ಸಾವು (ಐಪಿಸಿ 304) ಆರೋಪದಡಿ ಪ್ರಕರಣ ದಾಖಲಿಸಿದ್ದಾರೆ.
"ಮೊದಲ ಮಹಡಿಯಲ್ಲಿ ವ್ಯಾಪಾರ ನಡೆಸಲು ಅನುಮತಿ ಪಡೆದ ಹೋಟೆಲ್ ಮಾಲೀಕರು ಕೆಳಮಹಡಿಯಲ್ಲಿಯೇ ಹೋಟೆಲ್ ನಡೆಸುತ್ತಿದ್ದರೂ ಪಾಲಿಕೆ ಅಧಿಕಾರಿಗಳು ಅವರ ವಿರುದ್ಧ ಯಾವ ಕ್ರಮ ಕೈಗೊಂಡಿರಲಿಲ್ಲ. ಅಲ್ಲ್ದೆ ಮ್ಯಾನ್ ಹೋಲ್ ಸ್ವಚ್ಚತೆಗೆ ಕಡ್ಡಾಯವಾಗಿ ಯಂತ್ರಗಳನ್ನು ಬಳಸಬೇಕು, ಮಾನವರನ್ನಲ್ಲ ಎಂದು ಸರ್ವೋಚ್ಚ ನ್ಯಾಯಾಲಯ ಹೇಳಿದ್ದರೂ ಅದಕ್ಕೆ ವಿರುದ್ಧವಾಗಿ ಮನುಷ್ಯರನ್ನು ಕೆಲಸಕ್ಕೆ ಬಳಸಿಕೊಂಡ ಕಟ್ಟಡದ ಮಾಲೀಕರು ಹಾಗೂ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ." ಎಂದು ಕಮಿಷನರ್ ಟಿ ಸುನೀಲ್ ಕುಮಾರ್ ಹೇಳಿದರು.
"ಕಟ್ಟಡ ಮಾಲೀಕರು, ಅಸೋಸಿಯೇಷನ್ ಸದಸ್ಯರು (ಅಪಾರ್ಟ್ಮೆಂಟ್ ಸಂಕೀರ್ಣವಾಗಿದ್ದರೆ) ಮತ್ತು ಸರ್ಕಾರಿ ಅಧಿಕಾರಿಗಳ ವಿರುದ್ಧ ಪೊಲೀಸರು ಕ್ರಮ ಕೈಗೊಳ್ಳುತ್ತಾರೆ .ಅಂತಹ ಕಾನೂನುಬಾಹಿರ ಉದ್ಯಮಗಳನ್ನು ಮುಚ್ಚಲು ಬಿಬಿಎಂಪಿ ಕಮಿಷನರ್ ಗೆ ಪತ್ರವೊಂದನ್ನು ಬರೆಯುತ್ತೇನೆ" ಎಂದು ಅವರು ಹೇಳಿದರು.
ಹೋಟೆಲ್ ‘ಯುಮ್‌ಲೋಕ್ ನ ವ್ಯವಸ್ಥಾಪಕ ಆಯುಷ್ ಗುಪ್ತಾ ಹಾಗೂ ಕಟ್ಟಡದ ನಿರ್ವಹಣೆ ಉಸ್ತುವಾರಿ ವಹಿಸಿಕೊಂಡಿದ್ದ ವೆಂಕಟೇಶ್ ಅವರುಗಳನ್ನು ಇದಾಗಲೇ ಬಂಧಿಸಿರುವ ಪೋಲೀಸರು ಅವರ ವಿರುದ್ಧ ಮ್ಯಾನುಯಲ್ ಸ್ಕ್ಯಾಂಜಿಂಗ್ ಆಕ್ಟ್ ಮತ್ತು ಎಸ್ಸಿ / ಎಸ್ಟಿ ದೌರ್ಜನ್ಯ ನಿಷೇಧ ಕಾಯಿದೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.