ರಾಜ್ಯ

ಜೆಡಿಎಸ್ ವಿಕಾಸ ಪರ್ವದ ವೇಳೆ ಸಂಚಾರ ದಟ್ಟಣೆ: ರಾಜಕೀಯ ನಾಯಕರಿಗೆ ಹಿಡಿಶಾಪ ಹಾಕಿದ ಸವಾರರು

Manjula VN
ಬೆಂಗಳೂರು: ಯಲಹಂಕದ ನಿಟ್ಟೆ ಕಾಲೇಜು ಸಮೀಪ ಏರ್ಪಡಿಸಲಾಗಿದ್ದ ಜೆಡಿಎಸ್ ಪಕ್ಷದ ವಿಕಾಸ ಪರ್ವ ಸಮಾವೇಶದ ವೇಳೆ ಭಾರೀ ಸಂಚಾರ ದಟ್ಟಣೆ ಎದುರಾಗಿದ್ದು, ರಸ್ತೆಗಳಲ್ಲಿ ಗಂಟೆಗಟ್ಟಲೆ ನಿಂತ ಸವಾರರು ರಾಜಕೀಯ ನಾಯಕರಿಗೆ ಹಿಡಿಶಾಪ ಹಾಕಿದರು. 
ವಿಕಾಸ ಪರ್ವ ಸಮಾವೇಶದ ವೇಳೆ ವಿಮಾನ ನಿಲ್ದಾಣ ರಸ್ತೆಯಲ್ಲಿ ಭಾರೀ ವಾಹನ ದಟ್ಟಣೆ ಉಂಟಾಗಿ ರಸ್ತೆ ಸಂಪೂರ್ಣವಾಗಿ ಜಾಮ್ ಆಗಿತ್ತು. ಇದರಿಂದಾಗಿ ಸವಾರರು ಪರದಾಡುವ ಪರಿಸ್ಥಿತಿ ಎದುರಾಗಿತ್ತು. 
ಅರಮನೆ ರಸ್ತೆಯಿಂದ ಯಲಹಂಕ ಮುಖ್ಯರಸ್ತೆಯಲ್ಲಿರುವ ನಿಟ್ಟೆ ಮೀನಾಕ್ಷಿ ಕಾಲೇಜಿನವರೆಗೆ ಮಧ್ಯಾಹ್ನದಿಂದ ರಾತ್ರಿ 9 ಗಂಟೆವರೆಗೂ ವಾಹನ ದಟ್ಟಣೆ ಉಂಟಾಗಿತ್ತು. ಯಲಹಂಕದಿಂದ ವಿಮಾನ ನಿಲ್ದಾಣ ಮಾರ್ಗವಾಗಿ ಹೋಗುವ ಸಾರ್ವಜನಿಕರು ರಸ್ತೆಯಲ್ಲಿ ನಿಂತರು ಪರಿತಪಿಸಿದರು. 
ರಾಜ್ಯದ ವಿವಿಧ ಜಿಲ್ಲೆಯ ಮೂಲೆ-ಮೂಲೆಗಳಿಂದ ಲಕ್ಷಾಂತರ ಜೆಡಿಎಸ್ ಕಾರ್ಯಕರ್ತರು ವಿಕಾಸ ಪರ್ವ ಸಮಾವೇಶದಲ್ಲಿ ಭಾಗವಹಿಸಿದ್ದರು. ನಿನ್ನೆ ಬೆಳಿಗ್ಗೆಯಿಂದಲೇ ಖಾಸಗಿ ಮತ್ತು ಸರ್ಕಾರಿ ವಾಹನಗಳಲ್ಲಿ ಕಾರ್ಯಕರ್ತರು ಸಮಾವೇಶ ನಡೆಯುವ ಮೈದಾನದತ್ತ ಧಾವಿಸುತ್ತಿದ್ದರು. ಏಕಾಏಕಿ ಮಧ್ಯಾಹ್ನ 2 ಗಂಟೆ ಸುಮಾರಿಗೆ ವಾಹನಗಳು ಬಂದಿದ್ದರಿಂದಾಗಿ ವಿಮಾನ ನಿಲ್ದಾಣ ರಸ್ತೆಯಲ್ಲಿ ಸಂಪೂರ್ಣ ಸಂಚಾರ ಬಂದ್ ಆಗಿತ್ತು. ಇದರಿಂದಾಗಿ ನಿಟ್ಟೆ ಮೀನಾಕ್ಷಿ ಕಾಲೇಜಿನಿಂದ ನಾಗೇನಹಳ್ಳಿ ಗೇಟ್ ವರೆಗೂ ಸುಮಾರು 4-5 ಕಿ.ಮೀ ವಾಹನಗಳು ಸಾಲುಗಟ್ಟೆ ನಿಂತಿದ್ದವು. ಪರಿಣಾಮ ಸಮಾವೇಶಕ್ಕೆ ವಾಹನದಲ್ಲಿ ಬಂದಿದ್ದ ಕಾರ್ಯಕರ್ತರು ರಸ್ತೆಯಲ್ಲಿ ಇಳಿದು ನಡೆದುಕೊಂಡು ಕಾರ್ಯಕ್ರಮಕ್ಕೆ ಹೋಗುತ್ತಿದ್ದ ದೃಶ್ಯಗಳು ಕಂಡು ಬಂದಿತು. ಟ್ರಾಫಿಕ್ ನಲ್ಲಿ ಕೆಲ ಆ್ಯಂಬುಲೆನ್ಸ್ ಗಳು ಸಿಲುಕಿದ್ದರಿಂದಾಗಿ ರೋಗಿಗಳ ಸಂಬಂಧಿಕರು ಒದ್ದಾಡಿದರು. 
ಯಲಹಂಕ ಮಾರ್ಗವಾಗಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತೆರಳಬೇಕಿದ್ದ ಪ್ರಯಾಣಿಕರು ಟ್ರಾಫಿಕ್ ಜಾಮ್ ನಲ್ಲಿ ಸಿಲುಕಿದ್ದರು, ಸೂಕ್ತ ಸಮಯಕ್ಕೆ ವಿಮಾನ ನಿಲ್ದಾಣಕ್ಕೆ ಹೋಗಲು ಸಾಧ್ಯವಾಗದೆ ವಿಮಾನ ತಪ್ಪಿದ ಕಾರಣ ಪರಿತಪ್ಪಿಸಿ ಪೊಲೀಸರು ಮತ್ತು ರಾಜಕೀಯ ಪಕ್ಷದ ನಾಯಕರಿಗೆ ಶಪಿಸುತ್ತಿದ್ದರು. 
ಬೆಂಗಳೂರಿನ ಕೇಂದ್ರ ಭಾಗದಿಂದ ಹೊರ ಭಾಗದಲ್ಲಿ ಸಮಾವೇಶ ನಡೆದ ಕಾರಣ ಕೇಂದ್ರಭಾಗದಲ್ಲಿ ಯಾವುದೇ ವಾಹನ ದಟ್ಟಣೆಗಳು ಕಂಡು ಬಂದಿರಲಿಲ್ಲ. ಅರಮನೆ ಮೈದಾನದಲ್ಲಿ ಸಮಾವೇಶ ಆಯೋಜಿಸಿದ್ದರೆ, ಟ್ರಾಫಿಕ್ ನಿಂದ ನಗದರ ಜನತೆ ಬಸವಳಿಯಬೇಕಾಗಿತ್ತು ಎಂದು ಸಂಚಾರ ವಿಭಾಗದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. 
SCROLL FOR NEXT