ರಾಜ್ಯ

ಹಲ್ಲೆ ಪ್ರಕರಣ: ನಲಪಾಡ್ ಬಂಧಿಸಲು ವಿಫಲ; ಕಬ್ಬನ್ ಪಾರ್ಕ್ ಪೊಲೀಸ್ ಇನ್ಸ್ ಪೆಕ್ಟರ್ ಅಮಾನತು!

Srinivas Rao BV
ಬೆಂಗಳೂರು: ಉದ್ಯಮಿ ಲೋಕನಾಥ್ ಮಗ ವಿದ್ವತ್ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದ ಶಾಂತಿನಗರ ಕ್ಷೇತ್ರದ ಶಾಸಕ ಎನ್ ಎ ಹ್ಯಾರಿಸ್ ಪುತ್ರ ಮೊಹಮ್ಮದ್ ನಲಪಾಡ್ ನ್ನು ಬಂಧಿಸಲು ವಿಫಲವಾಗಿರುವ ಹಿನ್ನೆಲೆಯಲ್ಲಿ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆ ಇನ್ಸ್ ಪೆಕ್ಟರ್ ವಿಜಯ್ ಹಡಗಲಿ ಅವರನ್ನು ಅಮನಾನತುಗೊಳಿಸಲು ಪೊಲೀಸ್ ಆಯುಕ್ತ ಸುನಿಲ್ ಕುಮಾರ್ ಆದೇಶ ನೀಡಿದ್ದಾರೆ. 
ಸುದ್ದಿ ಚಾನೆಲ್ ಒಂದರ ವರದಿಯ ಪ್ರಕಾರ ಗೃಹ ಸಚಿವ ರಾಮಲಿಂಗಾ ರೆಡ್ಡಿ ಅವರ ಸೂಚನೆ ಮೇರೆಗೆ ಪೊಲೀಸ್ ಆಯುಕ್ತ ಸುನಿಲ್ ಕುಮಾರ್ ಇನ್ಸ್ ಪೆಕ್ಟರ್ ನ್ನು ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ ಎಂದು ತಿಳಿದುಬಂದಿದೆ.
ಯುಬಿ ಸಿಟಿಯಲ್ಲಿರುವ ಫೆಗ್ರಿ ಕಫೆ ರೆಸ್ಟೋರೆಂಟ್ ನಲ್ಲಿ ಫೆ.17 ರಂದು ರಾತ್ರಿ ಮೊಹಮ್ಮದ್ ನಲಪಾಡ್ ಮತ್ತು ಆತನ ಸ್ನೇಹಿತರು ವಿದ್ವತ್ ಎಂಬ ಯುವಕನಿಗೆ ಮನಬಂದಂತೆ ಥಳಿಸಿದ್ದಾರೆ. ಹಲ್ಲೆ ಪ್ರಕರಣ ನಂತರ ಪ್ರಮುಖ ಆರೋಪಿ ಮೊಹಮ್ಮದ್ ನಲಪಾಡ್ ನಾಪತ್ತೆಯಾಗಿದ್ದು, ಇತರ 5 ಆರೋಪಿಗಳನ್ನು ಬಂಧಿಸಲಾಗಿದೆ.  ಶಾಸಕ ಹ್ಯಾರಿಸ್ ಪುತ್ರ ನಡೆಸಿದ್ದ ಹಲ್ಲೆ ಪ್ರಕರಣ ಕಾಂಗ್ರೆಸ್ ಪಕ್ಷಕ್ಕೆ ತೀವ್ರ ಮುಜುಗರ ಉಂಟು ಮಾಡಿತ್ತು. ಹಲ್ಲೆ ಪ್ರಕರಣ ನಂತರ  ಈ ಹಿನ್ನೆಲೆಯಲ್ಲಿ ಸಂಜೆಯೊಳಗೆ ಎಲ್ಲಾ ಆರೋಪಿಗಳ ಬಂಧಿಸದಿದ್ದರೆ ಕಠಿಣ ಕ್ರಮ ಜರುಗಿಸುವುದಾಗಿ ಗೃಹ ಸಚಿವ ರಾಮಲಿಂಗಾ ರೆಡ್ಡಿ ಎಚ್ಚರಿಕೆ ನೀಡಿದ್ದರು. ರಾತ್ರಿ 8 ಗಂಟೆವರೆಗೂ ಬಂಧಿಸದೇ ಇದ್ದ ಹಿನ್ನೆಲೆಯಲ್ಲಿ ಕಬ್ಬನ್ ಪಾರ್ಕ್ ಇನ್ಸ್ ಪೆಕ್ಟರ್ ನ್ನು ಅಮಾನತು ಮಾಡಲು ಆದೇಶ ಹೊರಡಿಸಲಾಗಿದೆ. 
SCROLL FOR NEXT