ಸಾಂಸ್ಕೃತಿಕ ನಗರ ಮೈಸೂರಿನಲ್ಲಿ ನಿಗೂಢ ಶಬ್ಧಕ್ಕೆ ಬೆಚ್ಚಿಬಿದ್ದ ಜನ
ಮೈಸೂರು: ಮೈಸೂರಿನ ಕುವೆಂಪು ನಗರದ ಸುತ್ತಮುತ್ತ ಭಾರೀ ನಿಗೂಢ ಶಬ್ಧವೊಂದು ಕೇಳಿ ಬಂದಿದ್ದು, ನಿಗೂಢ ಶಬ್ಧಕ್ಕೆ ಭೀತಿಗೊಳಗಾದ ಜನತೆ ಬಾಂಬ್ ಸ್ಫೋಟ, ಭೂಕಂಪವೆಂದು ತಿಳಿದು ಮನೆಯಿಂದ ಹೊರಗೆ ಓಡಿ ಬಂದಿರುವ ಘಟನೆ ಗುರುವಾರ ನಡೆದಿದೆ.
ವಿದ್ಯಾರಣ್ಯಪುರ, ಕೆಆರ್ ಮೊಹಲ್ಲಾ, ದೇವರಾಜ ಮೊಹಲ್ಲಾ, ಕುವೆಂಪುನಗರ, ಸರಸ್ವತಿಪುರ, ದಟ್ಟಗಳ್ಳಿ, ಕೆ.ಜಿ.ಕೊಪ್ಪಳ, ಜಯಲಕ್ಷ್ಮಿಪುರ, ಗೋಕುಲಂ, ವಿವಿ.ಪುರಂ, ವಿಜಯನಗರ, ಯೆಲ್ವಾಳ್ ಸೇರಿದಂತೆ ಹಲವು ಪ್ರದೇಶಗಳಲ್ಲಿ ನಿನ್ನೆ ಮಧ್ಯಾಹ್ನ 12.30 ರಿಂದ 1 ಗಂಟೆ ಸುಮಾರಿಗೆ ನಿಗೂಢ ಶಬ್ಧವೊಂದು ಕೇಳಿಸಿದೆ. ಈ ವೇಳೆ ಭಯಗೊಂಡ ಜನರು ಮನೆ ಹಾಗೂ ಕಚೇರಿಗಳಿಗೆ ಹೊರಗೆ ಓಡಿಬಂದಿದ್ದಾರೆ.
ನಿಗೂಢ ಶಬ್ಧ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಕುವೆಂಪು ನಗರದ ನಿವಾಸಿ ಗೌರಮ್ಮ ಅವರು, ಮನೆಯಲ್ಲಿ ನಾನೊಬ್ಬಳೇ ಇದ್ದೆ. ಈ ವೇಳೆ ಜೋರಾಗಿ ಶಬ್ಧವೊಂದು ಕೇಳಿಸಿತು. ಈ ವೇಳೆ ಸಾಕಷ್ಟು ಭಯವಾಯಿತು. ಈ ವೇಳೆ ನೆರೆಮನೆಯಲ್ಲಿದ್ದ ಶಾರದಮ್ಮ ಅವರು ಕೂಗಿಕೊಂಡ ಶಬ್ಧ ಕೇಳಿ ಹೊರಗೆ ಓಡಿಬಂದೆ ಎಂದು ಹೇಳಿದ್ದಾರೆ.
ಕಲಾವತಿ ಎಂಬುವವರು ತಮ್ಮ ಅನುಭವವನ್ನು ಹಂಚಿಕೊಂಡಿದ್ದು, ಬಾಂಬ್ ಸ್ಫೋಟಗೊಂಡಂತಹ ಶಬ್ಧವೊಂದು ಕೇಳಿಸಿತ್ತು ಎಂದು ತಿಳಿಸಿದ್ದಾರೆ.
ಸರ್ಕಾರದ ನಿವೃತ್ತ ಉದ್ಯೋಗಿ ಶಿವಾನಂದ ಎಂಬುವವರು ಮಾತನಾಡಿ, ನಾನು ನನ್ನ ಸಹೋದರಿಯ ಮನೆಗೆ ತೆರಳುತ್ತಿದ್ದೆ. ಈ ವೇಳೆ ಭೂಕಂಪದ ಅನುಭವವಾಯಿತು ಎಂದಿದ್ದಾರೆ.
ಹಿರಿಯ ಭೂ ವಿಜ್ಞಾನಿ ಕೆವಿಆರ್ ಚೌಧರಿಯವರು ಮಾತನಾಡಿ, ನಮಗೂ ನಿಗೂಢ ಶಬ್ಧದ ಅನುಭವವಾಯಿತು. ಶಬ್ಧದ ಕುರಿತಂತೆ ಮಾಹಿತಿ ಕಲೆ ಹಾಕಲು ವಿವಿಧ ಪ್ರದೇಶಗಳಿಗೆ ಅಧಿಕಾರಿಗಳು ತೆರಳಿದ್ದಾರೆ. ಈಗಾಗಲೇ ನಾವು ಬೆಂಗಳೂರಿನ ಕರ್ನಾಟಕ ರಾಜ್ಯ ನೈಸರ್ಗಿಕ ವಿಪತ್ತು ನಿರ್ವಹಣಾ ಕೇಂದ್ರವನ್ನು ಸಂಪರ್ಕಿಸಿದ್ದೇವೆಂದು ಹೇಳಿದ್ದಾರೆ.
ಇದೇ ವೇಳೆ ಜನರು ಭೀತಿಗೊಳಗಾಗದಂತೆ ಮನವಿ ಮಾಡಿರುವ ಅವರು, ಭೂಕಂಪವಾಗುವ ಯಾವುದೇ ಸಂಭವಗಳಿಲ್ಲ ಎಂದಿದ್ದಾರೆ.