ಬೆಂಗಳೂರು: ಪೊಲೀಸರು ತಮ್ಮ ಬೈಕ್'ನ್ನು ಜಪ್ತಿ ಮಾಡಿ ಹಿಂತಿರುಗಿಸುತ್ತಿಲ್ಲ ಎಂಬ ಕಾರಣಕ್ಕೆ ವ್ಯಕ್ತಿಯೊಬ್ಬರು ಮೈಕೋ ಲೇಔಟ್ ಪೊಲೀಸ್ ಸಂಚಾರ ಠಾಣೆ ಎದುರು ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಶನಿವಾರ ತಡರಾತ್ರಿ ನಡೆದಿದೆ.
ಸಿ.ಕೆ. ಅಚ್ಚುಕಟ್ಟು ನಿವಾಸಿಯಾಗಿರುವ ಚಾಲಕ ಮಣಿಕಾಂತ್ ಆತ್ಮಹತ್ಯೆಗೆ ಶರಣಾದ ವ್ಯಕ್ತಿಯಾಗಿದ್ದಾರೆಂದು ತಿಳಿದುಬಂದಿದೆ.
ಕುಡಿದ ಮತ್ತಿನಲ್ಲಿ ಮಣಿಕಾಂತ್ ಈ ರೀತಿ ಮಾಡಿಕೊಂಡಿದ್ದಾನೆಂದು ಪೊಲೀಸರು ಹೇಳಿದ್ದಾರೆ.
ಮೂಲತಃ ತಮಿಳುನಾಡಿನ ಮಣಿಕಾಂತ್ ಬನ್ನೇರುಘಟ್ಟದಲ್ಲಿರುವ ಸೂಪರ್ ಮಾರುಕಟ್ಟೆಯಲ್ಲಿ ಚಾಲಕನಾಗಿ ಕೆಲಸ ಮಾಡುತ್ತಿದ್ದರು. ಮದ್ಯ ಸೇವಿಸಿದ್ದ ಮಣಿಕಾಂತ್ ಶನಿವಾರ ತಡರಾತ್ರಿ 2.15ರ ಸುಮಾರಿಗೆ ದ್ವಿಚಕ್ರ ವಾಹನದಲ್ಲಿ ಸಿಲ್ಕ್ ಬೋರ್ಡ್ ಜಂಕ್ಷನ್ ಮೂಲಕ ಜಯದೇವ ಆಸ್ಪತ್ರೆ ಕಡೆಗೆ ಬರುತ್ತಿದ್ದರು. ಈ ವೇಳೆ ಮಾರ್ಗದ ಮಧ್ಯೆ ಸಹಾಯಕ ಪೊಲೀಸ್ ಇನ್ ಪೆಕ್ಟರ್ ಮೂರ್ತಿ ಹಾಗೂ ಇಬ್ಬರು ಮುಖ್ಯ ಪೇದೆಗಳು ಡ್ರಂಕ್ ಆ್ಯಂಡ್ ಡ್ರೈವ್ ತಪಾಸಣೆ ನಡೆಸುತ್ತಿದ್ದರು. ಅದೇ ಮಾರ್ಗದಲ್ಲಿ ಬಂದ ಮಣಿಕಾಂತ್ ಅವರನ್ನು ತಡೆದ ಪೊಲೀಸರು ಆಲ್ಕೋ ಮೀಟರ್ ಮೂಲಕ ತಪಾಸಣೆಗೆ ಮುಂದಾಗಿದ್ದಾರೆ.
ಈ ವೇಳೆ ಮಣಿಕಾಂತ್ ಅವರು ಸಹಕರಿಸಿಲ್ಲ. ಜೊತೆಗೆ ವಾಹನದ ದಾಖಲೆಗಳನ್ನು ತೋರಿಸಿಲ್ಲ. ಹೀಗಾಗಿ ಪೊಲೀಸರು ವಾಹನವನ್ನು ಜಪ್ತಿ ಮಾಡಿ, ದಾಖಲೆ ನೀಡಿ ವಾಹನ ತೆಗೆದುಕೊಂಡು ಹೋಗುವಂತೆ ತಿಳಿಸಿದ್ದಾರೆ. ಅದರಂತೆ ಸ್ಥಳದಿಂದ ತೆರಳಿದ ಮಣಿಕಾಂತ್ ಅವರು 20 ನಿಮಿಷದ ಬಳಿಕ ಮೈಕೋ ಲೇಔಟ್ ಸಂಚಾರ ಠಾಣೆಗೆ ಹೋಗಿದ್ದಾನೆ. ಅಲ್ಲಿ ಪೊಲೀಸರು ಭ್ರಷ್ಟರು. ನನ್ನ ಬೈಕ್ ತೆಗೆದುಕೊಂಡು ಬಂದಿದ್ದಾರೆಂದು ಕೂಗಾಡಿದ್ದಾನೆ. ಅಲ್ಲದೆ ಪೆಟ್ರೋಲ್ ಬಂಕ್ ನಿಂದ ನೀರಿನ ಬಾಟಲಿಯಲ್ಲಿ ಪೆಟ್ರೋಲ್ ತಂದು ಠಾಣೆ ಬಳಿ ಸುರಿದುಕೊಂಡು ಬೆಂಕಿ ಹಚ್ಚಿಕೊಂಡಿದ್ದಾನೆ.
ಈ ವೇಳೆ ಆತನ ಚೀರಾಟ ಕೇಳಿ ಓಡಿ ಬಂದ ಪೊಲೀಸರು ಮಣಿಕಾಂತ್ ನನ್ನು ರಕ್ಷಿಸಿ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ, ಚಿಕಿತ್ಸೆ ಫಲಕಾಲಿಯಾಗದೆ ಸಂಜೆ 7 ಗಂಟೆ ಸುಮಾರಿಗೆ ಮಣಿಕಾಂತ್ ಮೃತಪಟ್ಟಿದ್ದಾರೆಂದು ತಿಳಿದುಬಂದಿದೆ.
ಈ ನಡುವೆ ಪೊಲೀಸರ ವಿರುದ್ಧ ಆರೋಪ ಮಾಡಿರುವ ಮಣಿಕಾಂತ್ ಕುಟುಂಬಸ್ಥರು, ಪೊಲೀಸರ ಕಿರುಕುಳದಿಂದ ಮಣಿಕಾಂತ್ ಸಾವನ್ನಪ್ಪಿದ್ದಾನೆಂದು ಹೇಳಿದ್ದಾರೆ.
ಮಣಿಕಾಂತ್ ವಿವಾಹವಾಗಿದ್ದು, ಕೌಟುಂಬಿಕೆ ಕಲಹದ ಹಿನ್ನಲೆಯಲ್ಲಿ ಪತ್ನಿ ತ್ಯಜಿಸಿ ಊರು ಸೇರಿದ್ದರು. ಪ್ರಕರಣ ಸಂಬಂಧ ಹೇಳಿಕೆ ನೀಡಲು ಮಣಿಕಾಂತ್ ಪತ್ನಿ ನಿರಾಕರಿಸಿದ್ದಾರೆಂದು ಪೊಲೀಸರು ಹೇಳಿದ್ದಾರೆ.
ಮಣಿಕಾಂತ್ ತನ್ನ ಸ್ನೇಹಿತ ರವಿ ಎಂಬುವವರ ಬಳಿ ತುರ್ತು ಕೆಲಸಕ್ಕಾಗಿ ದ್ವಿಚಕ್ರ ವಾಹನ ಬೇಕೆಂದು ಕೇಳಿದ್ದ. ರವಿ ಅವರು ಇನ್ನು ಕೆಲವೇ ದಿನಗಳಲ್ಲಿ ವಿವಾಹವಾಗುತ್ತಿರುವ ಹಿನ್ನಲೆಯಲ್ಲಿ, ವಿವಾಹದ ಆಮಂತ್ರಣ ಪತ್ರಿಕೆ ಹಂಚಬೇಕಿದ್ದು, ವಾಹನ ನೀಡಲು ನಿರಾಕರಿಸಿದ್ದ. ಬಳಿಕ ಸ್ನೇಹಿತನ ಮನವಿಗೆ ಕಟ್ಟು ಬಿದ್ದ ಮಣಿಕಾಂತ್'ಗೆ ವಾಹನ ಕೊಟ್ಟು ಕಳುಹಿಸಿದ್ದ ಎಂದು ತಿಳಿದುಬಂದಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics