ರಾಜ್ಯ

ಜಾಮೀನು ಅರ್ಜಿ ವಿಚಾರಣೆ ಮುಂದೂಡಿಕೆ: ಕಣ್ಣೀರು ಹಾಕಿದ ಮೊಹಮ್ಮದ್ ನಲಪಾಡ್

Vishwanath S
ಬೆಂಗಳೂರು: ವಿದ್ವತ್ ಮೇಲಿನ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ನಡೆದ ಜಾಮೀನು ಅರ್ಜಿ ವಿಚಾರಣೆಯನ್ನು ನ್ಯಾಯಾಧೀಶರು ನಾಳೆಗೆ ಮುಂದೂಡಿದ್ದು ಇದರಿಂದ ಜಾಮೀನು ನಿರೀಕ್ಷೆಯಲ್ಲಿದ್ದ ಎ1 ಆರೋಪಿ ಮೊಹಮ್ಮದ್ ನಲಪಾಡ್ ಕಣ್ಣೀರು ಹಾಕಿದ್ದಾನೆ. 
ಪ್ರಕರಣ ಸಂಬಂಧ 63ನೇ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯದಲ್ಲಿ ಇಂದು ವಿಚಾರಣೆ ನಡೆದಿದ್ದು ಜಾಮೀನು ಅರ್ಜಿಗೆ ಹೆಚ್ಚುವರಿ ಆಕ್ಷೇಪಣೆ ಅರ್ಜಿ ಸಲ್ಲಿಸಲು ನ್ಯಾಯಾಧೀಶರು ಆದೇಶಿಸಿದ್ದರು. ಅಂತೆ ವಿದ್ವತ್ ಪರ ವಕೀಲ ಶ್ಯಾಮ್ ಸುಂದರ್ ಅವರು ನಲಪಾಡ್ ಗೆ ಜಾಮೀನು ನೀಡದಂತೆ ಮನವಿ ಮಾಡಿದರು. ಇದಕ್ಕೆ ಪ್ರತಿಯಾಗಿ ನಲಪಾಡ್ ವಕೀಲ ಟಾಮಿ ಸೆಬಾಸ್ಟಿಯನ್ ಜಾಮೀನು ನೀಡುವಂತೆ ನ್ಯಾಯಧೀಶರಲ್ಲಿ ಮನವಿ ಮಾಡಿದರು. ಇನ್ನು ವಾದ-ವಿವಾದ ನಡುವೆ ಕೋರ್ಟ್ ಸಮಯ ಮುಗಿದಿದ್ದರಿಂದ ವಿಚಾರಣೆಯನ್ನು ನಾಳೆಗೆ ಮುಂದೂಡಿದರು. 
ನ್ಯಾಯಾಲಯದಲ್ಲಿ ನಡೆದ ವಾದ-ವಿವಾದಗಳನ್ನು ಶಾಂತಿನಗರದ ಶಾಸಕ ಎನ್ ಎ ಹ್ಯಾರಿಸ್ ಪುತ್ರ ಮೊಹಮ್ಮದ್ ನಲಪಾಡ್ ಜೈಲು ಅಧೀಕ್ಷಕರ ಕೊಠಡಿಯಲ್ಲಿ ಕುಳಿತು ಟಿವಿಯಲ್ಲಿ ನೋಡಿದ್ದು ಜಾಮೀನು ಅರ್ಜಿ ವಿಚಾರಣೆ ನಾಳೆಗೆ ಮುಂದೂಡಿದ್ದರಿಂದ ಛೇ.. ಎಂದು ಕಣ್ಣೀರು ಹಾಕಿ ತನ್ನ ಜೈಲು ಕೋಣೆಗೆ ತೆರೆಳಿದರು ಎಂದು ಹೇಳಲಾಗಿದೆ. 
ಕಳೆದ ಫೆಬ್ರವರಿ 17ರಂದು ರಾತ್ರಿ ಯುಬಿ ಸಿಟಿ ಕಟ್ಟಡದ ಫರ್ಜಿ ಕೆಫೆಯಲ್ಲಿ ವಿದ್ವತ್ ಮೇಲೆ ಗಂಭೀರ ಹಲ್ಲೆ ನಡೆದಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೊಹಮ್ಮದ್ ನಲಪಾಡ್ ಸೇರಿದಂತೆ 7 ಮಂದಿ ನ್ಯಾಯಾಂಗ ಬಂಧನದಲ್ಲಿದ್ದಾರೆ. 
SCROLL FOR NEXT