ರಾಜ್ಯ

ಶುಕ್ರವಾರ ಮೊಹಮ್ಮದ್ ನಲಪಾಡ್ ಗೆ ಜೈಲಾ, ಬೇಲಾ ನಿರ್ಧಾರ

Vishwanath S
ಬೆಂಗಳೂರು: ವಿದ್ವತ್ ಮೇಲಿನ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜೈಲು ಸೇರಿರುವ ಎ1 ಆರೋಪಿ ಮೊಹಮ್ಮದ್ ಹ್ಯಾರಿಸ್ ನಲಪಾಡ್ ಜಾಮೀನು ಅರ್ಜಿಯ ತೀರ್ಪನ್ನು ನ್ಯಾಯಾಲಯ ಮಾರ್ಚ್ 2ಕ್ಕೆ ಕಾಯ್ದಿರಿಸಿದೆ. 
ಪ್ರಕರಣ ಸಂಬಂಧ 63ನೇ ಹೆಚ್ಚುವರಿ ಸೆಷನ್ಸ್ ಕೋರ್ಟ್ ನ ನ್ಯಾಯಾಧೀಶರು ವಾದ-ಪ್ರತಿವಾದವನ್ನು ಆಲಿಸಿದ್ದು ಜಾಮೀನು ಅರ್ಜಿಯ ಆದೇಶವನ್ನು ಶುಕ್ರವಾರಕ್ಕೆ ಕಾಯ್ದಿರಿಸಿದೆ.
ಇನ್ನು ಶುಕ್ರವಾರ ಮೊಹಮ್ಮದ್ ನಲಪಾಡ್ ಗೆ ಜೈಲಾ ಅಥವಾ ಬೇಲಾ ಅನ್ನೋದು ನಿರ್ಧಾರವಾಗಲಿದೆ. ಇಂದು ಆರೋಪಿಗಳ ಪರ ವಕೀಲರು ಮತ್ತು ಸರ್ಕಾರದ ವಿಶೇಷ ಅಭಿಯೋಜಕರ ಮಧ್ಯೆ ಬಿರುಸಿನ ವಾದ ಪ್ರತಿವಾದಗಳು ನಡೆದವು. 
ಮೊಹಮ್ಮದ್ ನಲಪಾಡ್ ಪರ ವಾದ ಮಂಡಿಸಿದ ವಕೀಲ ಟಾಮಿ ಸೆಬಾಸ್ಟಿಯನ್ ಆರೋಪಿಗಳು ಈಗ ನ್ಯಾಯಾಂಗ ಬಂಧನದಲ್ಲಿದ್ದಾರೆ. ಪೊಲೀಸರ ತನಿಖೆಗೂ ಸಹಕರಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಜಾಮೀನು ನೀಡಬೇಕು ಎಂದು ಮನವಿ ಮಾಡಿದರು. 
ಇದಕ್ಕೆ ಪ್ರತಿವಾದ ಮಂಡಿಸಿದ ಸರ್ಕಾರಿ ವಿಶೇಷ ಅಭಿಯೋಜಕ ಆರೋಪಿಗಳು ಪ್ರಭಾವಿಯಾಗಿದ್ದಕ್ಕೆ ಪ್ರಕರಣ ದಾಖಲಾಗುತ್ತಿದ್ದಂತೆ ಪೊಲೀಸರಿಗೆ ಸಿಗದೇ ತಲೆಮರೆಸಿಕೊಂಡಿದ್ದರು. ಪೊಲೀಸರು ಹಲ್ಲೆಗೊಳಗಾದವನನ್ನು ರಕ್ಷಣೆ ಮಾಡುವುದು ಬಿಟ್ಟು ಆತ ಕುಡಿದಿದ್ದಾನಾ ಎಂದು ಪರೀಕ್ಷಿಸಿದ್ದಾರೆ. ಇನ್ನು ವಿದ್ವತ್ ಐಸಿಯೂನಿಂದ ವಾರ್ಡ್ ಗೆ ಶಿಫ್ಟ್ ಆಗಿದ್ದಾನೆ ಎಂಬ ಕಾರಣಕ್ಕೆ ಆರೋಪಿಗಳಿಗೆ ಜಾಮೀನು ನೀಡಬೇಕಾ? ಎಂದು ಶ್ಯಾಂ ಸುಂದರ್ ಪ್ರಶ್ನಿಸಿದರು. ಎರಡೂ ಕಡೆಯ ವಾದ ಆಲಿಸಿದ ನ್ಯಾಯಾಧೀಶರು ಆದೇಶವನ್ನು ಶುಕ್ರವಾರಕ್ಕೆ ಕಾಯ್ದಿರಿಸಿದ್ದಾರೆ. 
ಕಳೆದ ಫೆಬ್ರವರಿ 17ರಂದು ರಾತ್ರಿ ಯುಬಿ ಸಿಟಿ ಕಟ್ಟಡದ ಫರ್ಜಿ ಕೆಫೆಯಲ್ಲಿ ವಿದ್ವತ್ ಮೇಲೆ ಗಂಭೀರ ಹಲ್ಲೆ ನಡೆದಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೊಹಮ್ಮದ್ ನಲಪಾಡ್ ಸೇರಿದಂತೆ 7 ಮಂದಿ ನ್ಯಾಯಾಂಗ ಬಂಧನದಲ್ಲಿದ್ದಾರೆ. 
SCROLL FOR NEXT