ಬೆಂಗಳೂರು: ಅತ್ಯಾಚಾರ ಪ್ರಕರಣದ ಆರೋಪದಿಂದ ಮುಕ್ತಗೊಳಿಸಬೇಕು ಎಂದು ಕೋರಿದ್ದ ಅರ್ಜಿ ವಜಾಗೊಳಿಸಿರುವ ರಾಮನಗರ ಸೆಷನ್ಸ್ ನಾಯ್ಯಾಲಯದ ಆದೇಶ ಪ್ರಶ್ನಿಸಿ ಬಿಡದಿ ಧ್ಯಾನಪೀಠದ ನಿತ್ಯಾನಂದ ಸ್ವಾಮೀಜಿ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.
ಭಕ್ತೆಯೊಬ್ಬರ ಮೇಲಿನ ಅತ್ಯಾಚಾರ ಆರೋಪಕ್ಕೆ ಸಂಬಂಧಿಸಿದಂತೆ ಸ್ವಾಮೀಜಿ ಹಾಗೂ ಅವರ ಐವರ ಶಿಷ್ಯರ ವಿರುದ್ಧ ಧಾರ್ಮಿಕ ಭಾವನೆಗಳಿಗೆ ಧಕ್ಕೆ, ವಂಚನೆ, ಅತ್ಯಾಚಾರ, ಅಸಹಜ ಲೈಂಗಿಕ ಕ್ರಿಯೆ, ಜೀವ ಬೆದರಿಕೆ ಆರೋಪ ಹೊರಿಸಲಾಗಿದೆ. ಈ ಸಂಬಂಧ ಅಧೀನ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿಯನ್ನೂ ಸಲ್ಲಿಸಲಾಗಿದೆ.ಈ ದೋಷಾರೋಪ ಪಟ್ಟಿ ಆಧರಿಸಿ ವಿಚಾರಣೆ ನಡೆಸುವಂತೆ ಸುಪ್ರೀಂ ಕೋರ್ಟ್, 2017ರ ಡಿಸೆಂಬರ್‌ನಲ್ಲಿ ರಾಮನಗರ ಸೆಷನ್ಸ್ ನ್ಯಾಯಾಲಯಕ್ಕೆ ನಿರ್ದೇಶಿಸಿತ್ತು.
ವಿಚಾರಣೆ ನಡೆಸುತ್ತಿರುವ ಅಧೀನ ನ್ಯಾಯಾಲಯಕ್ಕೆ ನಿತ್ಯಾನಂದ ಸ್ವಾಮೀಜಿ ಹಾಗೂ ಅವರ ಶಿಷ್ಯರು, ‘ನಮ್ಮನ್ನು ಆರೋಪಗಳಿಂದ ಮುಕ್ತಗೊಳಿಸಬೇಕು’ ಎಂದು ಕೋರಿದ್ದರು. ಆದರೆ, ಸೆಷನ್ಸ್ ನ್ಯಾಯಾಲಯ ಈ ಅರ್ಜಿಯನ್ನು ತಿರಸ್ಕರಿಸಿತ್ತು. ಸೆಷನ್ಸ್ ನ್ಯಾಯಾಲಯದ ಈ ಆದೇಶವನ್ನು ಹೈಕೋರ್ಟ್‌ನಲ್ಲಿ ಪ್ರಶ್ನಿಸಲಾಗಿದೆ.