ಬೆಂಗಳೂರು: ಐದು ಮಂದಿ ಕಾರ್ಮಿಕರ ಸಾವಿಗೆ ಕಾರಣವಾದ ಬೆಂಗಳೂರಿನ ಕೈಲಾಶ್ ಬಾರ್ ಅಗ್ನಿ ದುರಂತ ಪ್ರಕರಣ ಸಂಬಂಧ ಬಂಧಿತರಾಗಿದ್ದ ಬಾರ್ ಮಾಲೀಕ ಪೊಲೀಸರಿಂದ ಪರಾರಿಯಾಗಿದ್ದಾನೆ ಎಂದು ತಿಳಿದುಬಂದಿದೆ.
ಬೆಂಗಳೂರಿನ ಸಿಟಿ ಮಾರುಕಟ್ಟೆ ಆವರಣದಲ್ಲಿರುವ ಕೈಲಾಶ್ ಬಾರ್ ಮತ್ತು ರೆಸ್ಟೋರೆಂಟ್ ನಲ್ಲಿ ನಿನ್ನೆ ರಾತ್ರಿ ಅಗ್ನಿ ಅವಘಡ ಸಂಭವಿಸಿತ್ತು. ಘಟನೆಯಲ್ಲಿ ಬಾರ್ ನ ಐವರು ಕಾರ್ಮಿಕರು ದಾರುಣವಾಗಿ ಸಾವನ್ನಪ್ಪಿದ್ದರು. ಈ ಘಟನೆ ಸಂಬಂಧ ಸಿಟಿ ಮಾರುಕಟ್ಟೆ ಪೊಲೀಸರು ರಾತ್ರಿಯೇ ಬಾರ್ ಮಾಲೀಕರಾದ ಆರ್.ವಿ.ದಯಾಶಂಕರ್ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದರು. ಆದರೆ ಇಂದು ಬೆಳಗ್ಗೆ ಬಾರ್ ಮಾಲೀಕ ದಯಾಶಂಕರ್ ಪೊಲೀಸರಿಗೆ ಚಳ್ಳೆ ಹಣ್ಣು ತಿನ್ನಿಸಿ ಪರಾರಿಯಾಗಿದ್ದಾನೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.
ದಯಾಶಂಕರ್ ಹೇಗೆ ಮತ್ತು ಯಾವಾಗ ಪರಾರಿಯಾದ ಎಂದು ತಿಳಿದುಬಂದಿಲ್ಲವಾದರೂ, ಪರಾರಿಯಾಗಿರುವ ದಯಾಶಂಕರ್ ಗಾಗಿ ಪೊಲೀಸರು ತೀವ್ರ ಶೋಧ ನಡೆಸಿದ್ದಾರೆ. ದಯಾಶಂಕರ್ ನಿವಾಸ ಮತ್ತು ಆತನ ಸಂಬಂಧಿಕರ ಮನೆಗಳಲ್ಲಿ ಪೊಲೀಸರು ಶೋಧಕ್ಕೆ ಮುಂದಾಗಿದ್ದಾರೆ.
ಇನ್ನು ಬಾರ್ ಮಾಲೀಕ ದಯಾ ಶಂಕರ್ ಪರಾರಿ ಕುರಿತು ಹಲವು ಅನುಮಾನಗಳು ವ್ಯಕ್ತವಾಗುತ್ತಿದ್ದು, ಮಾಲೀಕ ದಯಾಶಂಕರ್ ಗೆ ಪೊಲೀಸರು ಕರೆ ಮಾಡಿದ್ದರಂತೆ. ಕರೆ ವೇಳೆ ಠಾಣೆಗೆ ಆಗಮಿಸುವಂತೆ ಸೂಚಿಸಿದ್ದರಂತೆ. ಈ ವೇಳೆ ಠಾಣೆಗೆ ಬರುವುದಾಗಿ ಹೇಳಿದ್ದ ದಯಾನಂದ್ ಬಳಿಕ ಮೊಬೈಲ್ ಅನ್ನು ಸ್ವಿಚ್ ಆಫ್ ಮಾಡಿಕೊಂಡಿದ್ದಾರೆ. ಇನ್ನು ಪಾರ್ಶವಾಯುವಿಗೆ ತುತ್ತಾಗಿರುವ ದಯಾನಂದ್ ಬಾರ್ ಅನ್ನು ಬೇರೊಬ್ಬರಿಂದ ನಡೆಸುತ್ತಿದ್ದರಂತೆ. ಕಳೆದ 10 ವರ್ಷಗಳಿಂದ ದಯಾನಂದ್ ಅವರ ಆಪ್ತ ಸೋಮಶೇಖರ್ ಎಂಬುವವರು ಈ ಬಾರ್ ಅನ್ನು ನೋಡಿಕೊಳ್ಳುತ್ತಿದ್ದರಂತೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics