ವಾಟಾಳ್ ನಾಗರಾಜ್ ಸುದ್ದಿಗೋಷ್ಠಿ
ಹುಬ್ಬಳ್ಳಿ: ಕಳಸಾ ಬಂಡೂರಿ ಹಾಗೂ ಮಹದಾಯಿ ನದಿ ನೀರು ಬಿಡುಗಡೆ ವಿಚಾರಕ್ಕೆ ಸಂಬಂಧಿಸಿದಂತೆ ರೈತರು ನಡೆಸುತ್ತಿರುವ ಹೋರಾಟಕ್ಕೆ ಬೆಂಬಲ ಸೂಚಿಸಿ ಕನ್ನಡಪರ ಸಂಘಟನೆಗಳ ಪರವಾಗಿ ವಾಟಾಳ್ ನಾಗರಾಜ್ ಕರೆ ನೀಡಿರುವ ಕರ್ನಾಟಕ ಬಂದ್ ಗೆ ಕಳಸಾ ಬಂಡೂರಿ ಹೋರಾಟಗಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದೇ ಜನವರಿ 25ರಂದು ಕನ್ನಡ ಚಳವಳಿ ಪಕ್ಷದ ಮುಖ್ಯಸ್ಥ ಹಾಗೂ ಕನ್ನಡಪರ ಹೋರಾಟಗಾರರ ಒಕ್ಕೂಟದ ಮುಖಂಡ ವಾಟಾಳ್ ನಾಗರಾಜ್ ಕರೆ ನೀಡಿದ್ದ ಬಂದ್ಗೆ ಮಹದಾಯಿ ಹೋರಾಟಗಾರರಿಂದಲೇ ವ್ಯಾಪಕ ವಿರೋಧ ವ್ಯಕ್ತವಾಗಿದೆ. ಬಂದ್ ಕುರಿತಂತೆ ಚರ್ಚೆ ನಡೆಸಲು ಭಾನುವಾರ ಪತ್ರಿಕಾಗೋಷ್ಠಿ ಏರ್ಪಡಿಸಲಾಗಿತ್ತು. ಜನವರಿ 25ರಂದು ಸಮಗ್ರ ಕರ್ನಾಟಕ ಬಂದ್ ಮಾಡಲಾಗುವುದು ಹಾಗೂ ಫೆಬ್ರವರಿ 4ರಂದು ಪ್ರಧಾನಿ ಮೋದಿ ಬೆಂಗಳೂರಿಗೆ ಆಗಮಿಸಲಿದ್ದು, ಅಂದೂ ಕೂಡ ರಾಜ್ಯ ರಾಜಧಾನಿಗೆ ಬಂದ್ ಮಾಡಲಾಗುವುದು ಮತ್ತು ಕಪ್ಪು ಬಾವುಟ ತೋರಿಸಿ ಪ್ರತಿಭಟಿಸಲಾಗುವುದು ಎಂದು ವಾಟಳ್ ನಾಗರಾಜ್ ಅವರು ತಿಳಿಸಿದರು.
ಇದೇ ಸಂದರ್ಭದಲ್ಲಿ ಸ್ಥಳದಲ್ಲಿದ್ದ ಕಳಸಾ ಬಂಡೂರಿ ಹೋರಾಟಗಾರರು ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದರು. ಪದೇ ಪದೇ ಬಂದ್ಗೆ ಕರೆ ನೀಡುವುದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತದೆ. ಯಾರನ್ನು ಕೇಳಿ ಬಂದ್ ಗೆ ಕರೆ ನೀಡಿದ್ದೀರಿ? ಇದನ್ನು ವಾಪಸ್ ಪಡೆಯಿರಿ. ಪ್ರಧಾನಿ ಮೋದಿ ರಾಜ್ಯಕ್ಕೆ ಆಗಮಿಸುವ ದಿನ ಮಾತ್ರ ಬಂದ್ ಮಾಡಿ ಎಂದು ಸ್ಥಳೀಯ ಕಳಸಾ ಬಂಡೂರಿ ಹೋರಾಟಗಾರರ ಸಮನ್ವಯ ಸಮಿತಿ ಕಾರ್ಯಕರ್ತರು ಆಗ್ರಹಿಸಿದರು. ಅಲ್ಲದೆ ಕಳಸಾ ಬಂಡೂರಿ ಹೋರಾಟದ ಸಮನ್ವಯ ಸಮಿತಿಯಿಂದ ಬಂದ್ ಗೆ ಬೆಂಬಲವಿಲ್ಲ. ಅಲ್ಲದೆ ಪ್ರಧಾನಮಂತ್ರಿ ರಾಜ್ಯಕ್ಕೆ ಭೇಟಿನೀಡುವ ಸಮಯಲ್ಲಿ ಬಂದ್ ಮಾಡಿ, ಈಗಾಗಲೇ ಹತ್ತಾರು ಬಂದ್ ಮಾಡಿದ್ದೇವೆ. ಬಂದ್ ನಿಂದ ಯಾವುದೇ ಪ್ರಯೋಜನವಿಲ್ಲ. ಇದು ಹತ್ತರಲ್ಲಿ ಹನ್ನೊಂದನೆಯ ಬಂದ್ ಆಗಲಿದೆ ಎಂದು ಮುಖಂಡರು ತಿಳಿಸಿದರು.
ಹೋರಾಟಗಾರರ ಮಾತಿಗೆ ಕಿವಿಗೊಡದ ವಾಟಾಳ್ ಮತ್ತು ಕನ್ನಡ ಸಂಘಟನೆಗಳ ಮುಖಂಡರು, ನಿಮ್ಮ ಕೂಗಾಟಕ್ಕೆ ಬಂದ್‌ನಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು ಸುದ್ದಿಗೋಷ್ಠಿ ಯಿಂದ ಹೊರನಡೆದರು.
ಒಟ್ಟಾರೆ ಸತತ ಬಂದ್ ಸ್ವತಃ ಹೋರಾಟಗಾರರಲ್ಲೂ ಅಸಮಾಧಾನ ಉಂಟು ಮಾಡಿದ್ದು, ಮುಂಬರುವ ಕರ್ನಾಟಕ ಬಂದ್ ಗೆ ಎಂತಹ ಪ್ರತಿಕ್ರಿಯೆ ದೊರೆಯಲಿದೆ ಎಂಬುದನ್ನು ಕಾದು ನೋಡಬೇಕಿದೆ.