ರಾಜ್ಯ

134 ವರ್ಷಗಳ ನಂತರ ಬೆಂಗಳೂರಿನಲ್ಲಿ ದಾಖಲೆಯ ಕನಿಷ್ಠ ತಾಪಮಾನ

Srinivasamurthy VN
ಬೆಂಗಳೂರು: ರಾಜ್ಯದಲ್ಲಿ ಎರಡು ದಿನಗಳಿಂದ ಚಳಿಯ ಅಬ್ಬರ ಜೋರಾಗಿದ್ದು, ಬರೊಬ್ಬರಿ 134 ವರ್ಷಗಳ ಬಳಿಕ ಬೆಂಗಳೂರು ನಗರದ ತಾಪಮಾನ ಕನಿಷ್ಠ ಪ್ರಮಾಣಕ್ಕೆ ಇಳಿದಿತ್ತು ಎಂದು ಹವಾಮಾನ ಇಲಾಖೆಯ ಮೂಲಗಳು  ತಿಳಿಸಿವೆ.
ಪತ್ರಿಕೆಯೊಂದರ ವರದಿಯನ್ವಯ ಶನಿವಾರ ಬೆಳಗ್ಗೆ ಮತ್ತು ಭಾನುವಾರ ಮುಂಜಾನೆ ರಾಜಧಾನಿ ಬೆಂಗಳೂರಿನಲ್ಲಿ ಕನಿಷ್ಠ ಪ್ರಮಾಣದ ತಾಪಮಾನ ದಾಖಲಾಗಿದೆ. ಸುಮಾರು 134 ವರ್ಷಗಳ ನಂತರ ರಾಜಧಾನಿಯಲ್ಲಿ ಅತ್ಯಂತ  ಕನಿಷ್ಠ ತಾಪಮಾನ ದಾಖಲಾಗಿದ್ದು, ತಾಪಮಾನ ಒಂದಂಕಿ ಅಂದರೆ ಕನಿಷ್ಠ 7.7ಕ್ಕೆ ಇಳಿಕೆಯಾಗಿತ್ತು ಎಂದು ಹವಾಮಾನ ಇಲಾಖೆಯ ಮೂಲಗಳು ತಿಳಿಸಿವೆ. ಅಲ್ಲದೆ ಇನ್ನೂ ಮೂರ್ನಾಲ್ಕು ದಿನ ಇದೇ ರೀತಿಯ ವಾತಾವರಣ  ಮುಂದುವರಿಯುವ ನಿರೀಕ್ಷೆ ಇದೆ ಎಂದು ಹೇಳಲಾಗಿದೆ
ಶನಿವಾರ ಮುಂಜಾನೆಯಿಂದ ಭಾನುವಾರ ಬೆಳಿಗ್ಗೆವರೆಗೆ ಸಿಲಿಕಾನ್‌ ಸಿಟಿಯಲ್ಲಿ ಕನಿಷ್ಠ 7.7 ಹಾಗೂ ಗ್ರಾಮಾಂತರದಲ್ಲಿ 8.5 ಡಿಗ್ರಿ ಸೆಲ್ಸಿಯಸ್‌ ಕನಿಷ್ಠ ತಾಪಮಾನ ದಾಖಲಾಗಿದ್ದು, 1884ರ ಜನವರಿ 13ರಂದು ಬೆಂಗಳೂರಿನಲ್ಲಿ 7.8  ಡಿಗ್ರಿ ಸೆಲ್ಸಿಯಸ್‌ ಕನಿಷ್ಠ ತಾಪಮಾನ ಇತ್ತು.  ಉಳಿದಂತೆ ಹಾವೇರಿ ಜಿಲ್ಲೆಯಲ್ಲಿ ರಾಜ್ಯದಲ್ಲೇ ಅತ್ಯಂತ ಕನಿಷ್ಠ ತಾಪಮಾನ 7.1 ಡಿಗ್ರಿ ಸೆಲ್ಸಿಯಸ್‌ ದಾಖಲಾಗಿದ್ದು, ಭಾನುವಾರ 17 ಜಿಲ್ಲೆಗಳಲ್ಲಿ ಕನಿಷ್ಠ ತಾಪಮಾನ ಒಂದಂಕಿಗೆ  ಇಳಿದಿತ್ತು. 
ಇನ್ನು ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಹವಾಮಾನ ಇಲಾಖೆಯ ಅಧಿಕಾರಿಗಳು ಇಷ್ಟು ಪ್ರಮಾಣದ ಚಳಿಗೆ ಆತಂಕಪಡುವ ಅಗತ್ಯವಿಲ್ಲ. ಈ ಹಿಂದೆಯೂ ಇಂತಹ ತೀವ್ರ ಚಳಿಯ ವಾತಾವರಣ ಕಾಣಿಸಿತ್ತು. ಆಗುಂಬೆಯಲ್ಲಿ 1975ರ  ಜನವರಿ 10ರಂದು 3.2 ಮತ್ತು 2015ರ ಜನವರಿ 13ರಂದು 5.8 ಡಿಗ್ರಿ ಸೆಲ್ಸಿಯಸ್‌ ಕನಿಷ್ಠ ತಾಪಮಾನ ದಾಖಲಾಗಿರುವ ನಿದರ್ಶನವಿದೆ’ ಎಂದು ಹೇಳಿದ್ದಾರೆ.
SCROLL FOR NEXT