ಬೆಂಗಳೂರು: ಬೆಂಗಳೂರಿನಲ್ಲಿ ಪಾನಮತ್ತ ಚಾಲನೆಗೆ ಸಂಬಂಧಿಸಿದಂತೆ 2017 ರಲ್ಲಿ ಬರೋಬ್ಬರಿ 73,741 ಪ್ರಕರಣಗಳು ದಾಖಲಾಗಿದ್ದು, ಕಳೆದ ವರ್ಷ 59,028 ಪ್ರಕರಣಗಳು ದಾಖಲಾಗಿದ್ದವು. ಆದರೆ ಹಗಲಲ್ಲೂ ಕುಡಿದು ವಾಹನ ಚಾಲನೆ ಮಾಡುವವರ ವಿರುದ್ಧ ಪ್ರಕರಣಗಳು ದಾಖಲಾಗಿದ್ದಿದ್ದರೆ ಈ ಸಂಖ್ಯೆ ಇನ್ನೂ ಹೆಚ್ಚಿರುವ ಸಾಧ್ಯತೆ ಇತ್ತು. ಏಕೆಂದರೆ ಬೆಂಗಳೂರಿನ ಟ್ರಾಫಿಕ್ ಪೊಲೀಸರು ಮದ್ಯ ಸೇವಿಸಿ ವಾಹನ ಚಾಲನೆ ಮಾಡುವವರನ್ನು ತಪಾಸಣೆಗೊಳಪಡಿಸುವುದು ರಾತ್ರಿ ಹೊತ್ತು ಮಾತ್ರ.
ಹಗಲಿನಲ್ಲೂ ಮದ್ಯ ಸೇವಿಸಿ ವಾಹನ ಚಾಲನೆ ಮಾಡುವವರ ಸಂಖ್ಯೆ ಹೆಚ್ಚಿದ್ದು, ಶನಿವಾರ, ಭಾನುವಾರ, ಸರಣಿ ರಜೆದಿನಗಳಲ್ಲಿ ಈ ಸಂಖ್ಯೆ ಎಂದಿಗಿಂತ ಹೆಚ್ಚಿರುತ್ತದೆ. ಟ್ರಾಫಿಕ್ ಪೊಲೀಸ್ ವಿಭಾಗದಲ್ಲಿನ ಸಿಬ್ಬಂದಿಗಳ ಕೊರತೆ ಇರುವ ಹಿನ್ನೆಲೆಯಲ್ಲಿ ಸಂಚಾರಿ ಪೊಲೀಸರು ಕೇವಲ ರಾತ್ರಿ ವೇಳೆ ಮಾತ್ರ ಮದ್ಯ ಸೇವನೆ ತಪಾಸಣೆ ಮಾಡುತ್ತಿದ್ದು, ಜನರು ಇದನ್ನೇ ಅವಕಾಶವಾಗಿ ಬಳಸಿಕೊಂಡು ಹಗಲಿನಲ್ಲಿ ಮದ್ಯ ಸೇವನೆ ಮಾಡಿ ವಾಹನ ಚಲಾಯಿಸುತ್ತಿದ್ದಾರೆ. ಆದರೆ ರಸ್ತೆ ಅಪಘಾತಗಳು ಸಂಭವಿಸಿದಾಗ ಮಾತ್ರವಷ್ಟೇ ಈ ರೀತಿಯ ಪ್ರಕರಣಗಳು ಬೆಳಕಿಗೆ ಬರುತ್ತವೆ.
ಸಂಚಾರಿ ಪೊಲೀಸರು ಬೆಳಿಗ್ಗೆ ಹೊತ್ತಿನಲ್ಲೂ ಮದ್ಯ ಸೇವನೆ ತಪಾಸಣೆ ಮಾಡದೇ ಇರುವುದಕ್ಕೆ ಮೂರು ಪ್ರಧಾನ ಕಾರಣಗಳಿವೆ ಎನ್ನುತ್ತಾರೆ ಸಂಚಾರ ವಿಷಯಗಳಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರಕ್ಕೆ ಸಲಹೆಗಾರರಾಗಿರುವ ಎಂಎನ್ ಶ್ರೀಹರಿ. ಮೊದಲನೆಯನ್ನು ಸಚಾರಿ ವಿಭಾದಲ್ಲಿ ಸಿಬ್ಬಂದಿಗಳ ಕೊರತೆ ಇದ್ದು ರಾತ್ರಿ ವೇಳೆಯಷ್ಟೇ ತಪಾಸಣೆ ನಡೆಯುತ್ತಿದೆ. ಎರಡನೆಯದಾಗಿ ಸಂಚಾರಿ ನಿಯಮಗಳನ್ನು ಉಲ್ಲಂಘಿಸಿದರೆ ಅದನ್ನು ಗಮನಿಸುವಂತಹ ಸ್ವಯಂ ಚಾಲಿತ ತಂತ್ರಜ್ಞಾನ ಇಲ್ಲದೇ ಇರುವುದೂ ಸಹ ಹಗಲು ಮದ್ಯ ಸೇವನೆ ಮಾಡಿ ವಾಹನ ಚಾಲನೆ ಮಾಡುವುದಕ್ಕೂ ಕಾರಣವಾಗಿದೆ. ಅಷ್ಟೇ ಅಲ್ಲದೇ ಬೆಳಿಗ್ಗೆ ವೇಳೆಯಲ್ಲೂ ಮದ್ಯ ತಪಾಸಣೆಗೆ ನಿಂತರೆ ವಾಹನಗಳ ಸುಗಮ ಸಂಚಾರಕ್ಕೆ ಅಡ್ಡಿಯಾಗಿ ಈಗಿರುವ ವಾಹನ ದಟ್ಟಣೆಗಿಂತಲೂ ಹೆಚ್ಚು ವಾಹನ ದಟ್ಟಣೆ ಉಂಟಾಗಲಿದೆ ಈ ಹಿನ್ನೆಲೆಯಲ್ಲಿ ಹಗಲಿನಲ್ಲೂ ಮದ್ಯ ಸೇವಿಸಿ ವಾಹನ ಚಾಲನೆ ಮಾಡುವವರನ್ನು ಪತ್ತೆ ಹಚ್ಚಿ ಪ್ರಕರಣ ದಾಖಲಿಸಲು ಸಾಧ್ಯವಾಗುತ್ತಿಲ್ಲ ಎಂದು ಎಂಎನ್ ಶ್ರೀಹರಿ ಹೇಳಿದ್ದಾರೆ.