2018 ರ ಕರ್ನಾಟಕ ವಿಧಾನಸಭೆ ಚುನಾವಣಾ ಅಖಾಡಕ್ಕೆ ಹಿಂದೂ ಮಹಾಸಭಾ; 150 ಕ್ಷೇತ್ರಗಳಲ್ಲಿ ಸ್ಪರ್ಧೆ!
ಬೆಂಗಳೂರು: 2018ರ ಕರ್ನಾಟಕ ವಿಧಾನಸಭಾ ಚುನಾವಣೆಯ ಅಖಾಡಕ್ಕೆ ಹಿಂದೂ ಮಹಾಸಭಾ ಧುಮುಕಿದ್ದು 150 ವಿಧಾನಸಭಾ ಕ್ಷೇತ್ರಗಳಲ್ಲಿ ಸ್ಪರ್ಧಿಸುವುದಾಗಿ ತಿಳಿಸಿದೆ.
ಫೆಬ್ರವರಿ ತಿಂಗಳಲ್ಲಿ ಹಿಂದೂ ಮಹಾಸಭಾ ತನ್ನ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಲಿದೆ ಎಂದು ರಾಜ್ಯಾಧ್ಯಕ್ಷ ಎನ್ ಸುಬ್ರಹ್ಮಣ್ಯ ರಾಜು ಹೇಳಿದ್ದಾರೆ. ಬಿಜೆಪಿ ಈ ಹಿಂದೆಯೇ ಹಿಂದುತ್ವದೆಡೆಗೆ ತನ್ನ ಬದ್ಧತೆಯನ್ನು ಕಳೆದುಕೊಂಡಿದೆ. ಆದ್ದರಿಂದ ಹಿಂದೂ ಮಹಾಸಭಾ ಬಿಜೆಪಿಯನ್ನು ಸೈದ್ಧಾಂತಿಕ ಅಥವಾ ರಾಜಕೀಯ ಮಿತ್ರಪಕ್ಷ ಎಂದು ಪರಿಗಣಿಸುವುದಿಲ್ಲ ಎಂದು ಸುಬ್ರಹ್ಮಣ್ಯ ರಾಜು ಮಾಧ್ಯಮಗಳಿಗೆ ನೀಡಿರುವ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಸಿಎಂ ಸಿದ್ದರಾಮಯ್ಯ ವಿರುದ್ಧವೂ ಅಸಮಾಧಾನ ವ್ಯಕ್ತಪಡಿಸಿರುವ ಸುಬ್ರಹ್ಮಣ್ಯ ರಾಜು, ಸಿದ್ದರಾಮಯ್ಯ ಅಲ್ಪಸಂಖ್ಯಾತರನ್ನು ಓಲೈಕೆ ಮಾಡುತ್ತಿದ್ದಾರೆ, ಆದರೆ ಕೇವಲ ಎಸ್ ಡಿಪಿಐ ಹಾಗೂ ಪಿಎಫ್ಐ ಕಾರ್ಯಕರ್ತರ ವಿರುದ್ಧದ ಪ್ರಕರಣಗಳನ್ನು ವಾಪಸ್ ಪಡೆಯುವುದರಿಂದಷ್ಟೇ ಕಾಂಗ್ರೆಸ್ ಅಥವಾ ಸಿದ್ದರಾಮಯ್ಯ ಗೆಲ್ಲುವುದಿಲ್ಲ ಎಂದು ರಾಜು ಹೇಳಿದ್ದಾರೆ.