ಅಪಹರಣಕ್ಕೀಡಾಗಿದ್ದ ಬಾಲಕ ಚಂದನ್
ಬೆಂಗಳೂರು: ಹಣದಾಸೆಗೆ ಬಾಲಕನ ಅಪಹರಣ ಮಾಡಿದ್ದ ದುಷ್ಕರ್ಮಿಗಳನ್ನು ಬೆನ್ನಟ್ಟಿದ್ದ ಬೆಂಗಳೂರು ಪೊಲೀಸರು ಅಪಹರಣಕಾರನೋರ್ವನಿಗೆ ಗುಂಡಿಕ್ಕಿ ಬಾಲಕನ ರಕ್ಷಣೆ ಮಾಡಿರುವ ಘಟನೆ ಬೆಂಗಳೂರಿನ ಕೆಂಗೇರಿ ಬಳಿ ನಡೆದಿದೆ.
ಪೊಲೀಸ್ ಮೂಲಗಳು ತಿಳಿಸಿರುವಂತೆ ಭಾನುವಾರ ಮಧ್ಯಾಹ್ನ ಮಾಗಡಿ ರಸ್ತೆಯ ಮಂಜುನಾಥ ನಗರಕ್ಕೆ ಕೆಂಪು ಬಣ್ಣದ ಸ್ಯಾಂಟ್ರೊ ಕಾರಿನಲ್ಲಿ ಬಂದಿದ್ದ ಮೂವರು ಅಪಹರಣಕಾರರು, ಮನೆ ಮುಂದೆ ಆಟವಾಡುತ್ತಿದ್ದ ಬಾಲಕ ಚಂದನ್ ನನ್ನು ಅಪಹರಿಸಿಕೊಂಡು ಹೋಗಿದ್ದರು. ಬಾಲಕನ ಅಪಹರಣ ವಿಚಾರ ತಿಳಿಯುತ್ತಿದ್ದಂತೆಯೇ ಕ್ಷಿಪ್ರ ಕಾರ್ಯಾಚರಣೆ ನಡೆಸಿದ ಕೆಂಪಾಪುರ ಅಗ್ರಹಾರ ಠಾಣೆ ಪೊಲೀಸರು ಆರೋಪಿಗಳನ್ನು ಪತ್ತೆ ಮಾಡುವಲ್ಲಿ ಯಶಸ್ವಿಯಾಗಿ, ಬಾಲಕನನ್ನು ರಕ್ಷಿಸಿ ಪೋಷಕರ ವಶಕ್ಕೆ ಒಪ್ಪಿಸಿದ್ದಾರೆ. ಅಲ್ಲದೆ ನಾಲ್ಕು ಮಂದಿ ಅಪಹರಣಕಾರರನ್ನು ಬಂಧಿಸಿದ್ದಾರೆ. ಬಂಧಿತರನ್ನು ದಿವ್ಯತೇಜ್, ಶ್ರೀಕಾಂತ್ ಅಲಿಯಾಸ್ ಶ್ರೀ ಹಾಗೂ ಹರ್ಷಿತ್ ಮತ್ತು ಅಭಿಷೇಕ್ ಎಂದು ಗುರುತಿಸಲಾಗಿದೆ. ಈ ಪೈಕಿ ಅಭಿಷೇಕ್ ಎಂಬಾತನೇ ಪ್ರಮುಖ ಆರೋಪಿ ಎಂದು ತಿಳಿದುಬಂದಿದೆ.
ಮಂಜುನಾಥನಗರದ ಅಭಿಷೇಕ್ ರಾಜೇಶ್‌ಗೆ ಪರಿಚಿತನಾಗಿದ್ದು, ಅಭಿಷೇಕ್ ಟ್ರಾವೆಲ್ಸ್ ಏಜೆನ್ಸಿ ನಡೆಸುತ್ತಿದ್ದು, ರಾಜೇಶ್ ಏಜೆನ್ಸಿಯ ಮಿನಿಬಸ್‌ನ ಚಾಲಕನಾಗಿ ಕೆಲಸ ಮಾಡುತ್ತಿದ್ದರು. ಅಭಿಷೇಕ್, ಟ್ರಾವೆಲ್ಸ್ ಏಜೆನ್ಸಿಯಲ್ಲಿ ನಷ್ಟ ಅನುಭವಿಸಿದ್ದ. ಹೀಗಾಗಿ, ಮಿನಿಬಸ್ ಚಾಲಕನಾಗಿದ್ದ ರಾಜೇಶ್‌ಗೆ ಆಂಧ್ರಪ್ರದೇಶದಲ್ಲಿ 20 ಎಕರೆ ಜಮೀನು ಇದೆ ಎಂಬ ಮಾಹಿತಿ ಗೊತ್ತಿದ್ದರಿಂದ ಅಪಹರಣಕ್ಕೆ ಮುಂದಾದ ಎಂದು ಪೊಲೀಸರು ತಿಳಿಸಿದ್ದಾರೆ. ಜನವರಿ 28ರಂದು ಚಂದನ್ ತಾಯಿ ಮಾಲಾ ಹುಟ್ಟಹಬ್ಬ ಇದ್ದ ಕಾರಣ ದೇವಸ್ಥಾನಕ್ಕೆ ಹೋಗಿದ್ದರು. ಪುತ್ರ ಚಂದನ್ ಮನೆ ಬಳಿ ಆಟವಾಡುತ್ತಿದ್ದ. ಇದೇ ವೇಳೆ ಅಲ್ಲಿಗೆ ಬಂದ ಅಭಿಷೇಕ್ ಅಂಗಡಿಗೆ ಕರೆದೊಯ್ದು ತಿಂಡಿ ಕೊಡಿಸುವುದಾಗಿ ಹೇಳಿದ್ದಾನೆ. ಪರಿಚಯ ಇದ್ದ ಕಾರಣ ಬಾಲಕ ಒಪ್ಪಿದ್ದಾನೆ. ಆಗ ಚಂದನ್‌ನನ್ನು ಬೈಕ್‌ನಲ್ಲಿ ಕರೆದೊಯ್ದು ಅಭಿಷೇಕ್ ಮತ್ತೂಬ್ಬ ಆರೋಪಿ ದಿವ್ಯತೇಜ್‌ಗೆ ಜತೆ ಕಳುಹಿಸಿದ. ಮಗು ಮನೆಗೆ ಬಾರದ ಕಾರಣ ಗಾಬರಿಗೊಂಡ ರಾಜೇಶ್ ಎಲ್ಲೆಡೆ ಹುಡುಕಾಡಿ ಬಳಿಕ ಠಾಣೆಗೆ ದೂರು ನೀಡಿದ್ದಾರೆ.
ಇದೇ ವೇಳೆ ದೂರವಾಣಿ ಕರೆ ಮಾಡಿದ ದುಷ್ಕರ್ಮಿಯೊಬ್ಬ ವಿಷಯ ತಿಳಿಸಿ 30 ಲಕ್ಷ ಹಣಕ್ಕೆ ಬೇಡಿಕೆ ಇಟ್ಟಿದ್ದ. ಈ ಹಿನ್ನೆಲೆಯಲ್ಲಿ ಪೊಲೀಸರು ತಂಡ, ಸ್ಥಳೀಯ ಸಿಸಿಟಿವಿ ಹಾಗೂ ಮೊಬೈಲ್ ಕರೆಗಳ ಮಾಹಿತಿಯನ್ನಾಧರಿಸಿ ಮೊದಲಿಗೆ ಅಭಿಷೇಕ್‌ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಸತ್ಯಾಂಶ ಬೆಳಕಿಗೆ ಬಂದಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ನಾಲ್ಕು ವಾರಗಳಿಂದ ಕೃತ್ಯಕ್ಕೆ ಸಂಚು ರೂಪಿಸಿದ್ದ ಅಭಿಷೇಕ್ ಇತರೆ ಆರೋಪಿಗಳಿಗೆ ಹೊಸ ಸಿಮ್, ಮೊಬೈಲ್ ಕೊಡಿಸಿದ್ದ. ಹಾಗೆಯೇ ಸುತ್ತಾಡಲು ಸ್ಯಾಂಟ್ರೋ ಕಾರು ಕೂಡ ಕೊಟ್ಟಿದ್ದ. ಬಾಲಕನನ್ನು ದುಷ್ಕರ್ಮಿಗಳ ಜತೆ ಕಳುಹಿಸಿ ವಾಪಸ್ ಮನೆಗೆ ಬಂದಿದ್ದ ಅಭಿಷೇಕ್, ರಾಜೇಶ್ ಜತೆ ಚಂದನ್‌ಗಾಗಿ ಹುಡುಕಾಡಿದ್ದಾನೆ. ದಂಪತಿಗಳಿಗೆ ಧೈರ್ಯ ತುಂಬಿದ್ದಾನೆ.
ಈ ಮಧ್ಯೆ ದಿವ್ಯತೇಜ ಅಲಿಯಾಸ್ ಡಿಜೆ, ಹರ್ಷಿತ್ ಮತ್ತು ವಿಠಲ್‌ನಗರದ ಶ್ರೀಕಾಂತ್ ಮಗುವಿನೊಂದಿಗೆ ತಮಿಳುನಾಡಿನ ಕೃಷ್ಣಗಿರಿಗೆ ಹೋಗಿ, ಬಳಿಕ ಸೋಮವಾರ ಬೆಳಗ್ಗೆ ಮೈಸೂರಿಗೆ ಬಂದಿದ್ದರು. ಈ ಮಾಹಿತಿ ಸಂಗ್ರಹಿಸಿದ ಪೊಲೀಸರು ಅಭಿಷೇಕ್ ಮೂಲಕವೇ ಆರೋಪಿಗಳಿಗೆ ಕರೆ ಮಾಡಿಸಿ ರಾಜೇಶ್ ಹಣ ಹೊಂದಿಸಿಕೊಂಡಿದ್ದು ಬೆಂಗಳೂರಿಗೆ ಬರುವಂತೆ ಹೇಳಿಸಿದ್ದರು. ಈ ವೇಳೆ ಕೆಂಗೇರಿಯ ಕೊಮ್ಮಘಟ್ಟ ಮುಖ್ಯರಸ್ತೆಯಲ್ಲಿ ಆರೋಪಿಗಳಿರುವ ಮಾಹಿತಿ ಪಡೆದ ಪೊಲೀಸರು ಅವರನ್ನು ಸುತ್ತುವರೆದು ಬಂಧನಕ್ಕೆ ಮುಂದಾಗಿದ್ದಾರೆ. ಪೊಲೀಸರು ದಾಳಿ ಮಾಡುತ್ತಿದ್ದಂತೆಯೇ ಆರೋಪಿ ದಿವ್ಯತೇಜ್ ಪೊಲೀಸರ ಮೇಲೆ ಮಚ್ಚಿನಿಂದ ದಾಳಿ ನಡೆಸಿದ್ದಾನೆ. ಈ ವೇಳೆ ಇನ್ಸ್ ಪೆಕ್ಟರ್ ಮಂಜು ಆತನ ಮೇಲೆ ಫೈರಿಂಗ್ ಮಾಡಿದ್ದು, ಆತನ ಕಾಲಿಗೆ ಗುಂಡು ತಗುಲಿದೆ. ಪ್ರಸ್ತುತ ಆರೋಪಿಯನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics