ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನವನ
ಬೆಂಗಳೂರು: ಪ್ರಜಾಪ್ರಭುತ್ವ ಪ್ರತಿಭಟನೆಗಳಿಗೆ ಖ್ಯಾತಿ ಪಡೆದಿರುವ ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನವನವನ್ನು ಪ್ರವಾಸಿ ತಾಣವಾಗಿಸುವ ಯಾವುದೇ ಪ್ರಸ್ತಾಪ ಸರ್ಕಾರದ ಮುಂದಿಲ್ಲ. ಆ ಬಗೆಗಿಗನ ಎಲ್ಲ ಸುದ್ದಿಗಳು ಸುಳ್ಳು ಎಂದು ಸಿಎಂ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ.
ಈಗ್ಗೆ ಕಳೆದ ಕೆಲವು ದಿನಗಳಿಂದ ಪ್ರತಿಭಟನೆ, ಮುಷ್ಕರ,ಧರಣಿ, ಸತ್ಯಾಗ್ರಹಗಳಿಗೆ ಪ್ರಮುಖ ಸ್ಥಳವಾಗಿರುವ ಬೆಂಗಳೂರಿನ ಫ್ರೀಡಂ ಪಾರ್ಕ್ ಅನ್ನು ಪ್ರವಾಸಿ ತಾಣವಾಗಿ ರೂಪುಗೊಳಿಸಲು ಸರ್ಕಾರ ನಿರ್ಧರಿಸಿದ್ದು, ಇದರ ಮೇಲ್ವಿಚಾರಣೆಯನ್ನು ಬಿಬಿಎಂಪಿಯಿಂದ ಪ್ರವಾಸೋದ್ಯಮ ಇಲಾಖೆಗೆ ವಹಿಸಲಾಗಿದೆ ಎಂಬ ಸುದ್ದಿ ಹರಿದಾಡುತ್ತಿತ್ತು. ಈ ಬಗ್ಗೆ ಇಂದು ಟ್ವಿಟರ್ ನಲ್ಲಿ ಸ್ಪಷ್ಟನೆ ನೀಡಿರುವ ಸಿಎಂ ಸಿದ್ದರಾಮಯ್ಯ ಅವರು, ಸ್ವಾತಂತ್ರ್ಯ ಉದ್ಯಾನವನವನ್ನು ಪ್ರವಾಸಿ ತಾಣವಾಗಿಸುವ ಯಾವುದೇ ಪ್ರಸ್ತಾಪ ಸರ್ಕಾರದ ಮುಂದಿಲ್ಲ. ಇಂತಹ ಸುದ್ದಿ ಸತ್ಯಕ್ಕೆ ದೂರವಾದದ್ದು, ಸ್ವಾತಂತ್ರ್ಯ ಉದ್ಯಾನವನ ಈ ಹಿಂದಿನಂತೆ ಪ್ರಜಾಪ್ರಭುತ್ವ ಪ್ರತಿಭಟನೆಗಳ ತಾಣವಾಗಿ ಮುಂದುವರೆಯಲಿದೆ ಎಂದು ಸ್ಪಷ್ಟನೆ ನೀಡಿದ್ದಾರೆ.
ಇತ್ತೀಚೆಗಷ್ಟೇ ಈ ಬಗ್ಗೆ ಹರಿದಾಡಿದ್ದು ಒಂದು ಸುದ್ದಿಯಲ್ಲಿ ಫ್ರೀಡಂ ಪಾರ್ಕ್ ಶೀಘ್ರದಲ್ಲಿಯೇ ನಗರದ ಪ್ರವಾಸಿ ತಾಣವಾಗಿ ರೂಪುಗೊಳ್ಳಲಿದೆ. ಇದರ ಮೇಲ್ವಿಚಾರಣೆಯನ್ನು ಬಿಬಿಎಂಪಿಯಿಂದ ಪ್ರವಾಸೋದ್ಯಮ ಇಲಾಖೆಗೆ ವಹಿಸಲಾಗಿದೆ. ಬಿಬಿಎಂಪಿಯ ತೋಟಗಾರಿಕೆ ಸ್ಥಾಯಿ ಸಮಿತಿಯ ನಿರ್ವಹಣೆಯಲ್ಲಿರು ಫ್ರೀಡಂ ಪಾರ್ಕ್ ಅನ್ನು ಐದು ವರ್ಷಗಳ ಅವಧಿಗೆ ಪ್ರವಾಸೋದ್ಯಮ ಇಲಾಖೆಗೆ ವಹಿಸುವ ಸಂಬಂಧ ಸ್ಥಾಯಿ ಸಮಿತಿ ನಿರ್ಣಯವೊಂದನ್ನು ಅಂಗೀಕರಿಸಲಾಗಿದೆ ಎಂದು ಸುದ್ದಿಯಾಗಿತ್ತು.
ಆದರೆ ಈ ಬಗ್ಗೆ ಸ್ಲತಃ ಸಿಎಂ ಸಿದ್ದರಾಮಯ್ಯ ಇದೀಗ ಟ್ವಿಟರ್ ನಲ್ಲಿ ಸ್ಪಷ್ಟನೆ ನೀಡಿ ಅಂತಹ ಯಾವುದೇ ಪ್ರಸ್ತಾಪ ಸರ್ಕಾರದ ಮುಂದಿಲ್ಲ ಎಂದು ಹೇಳಿದ್ದಾರೆ.