ರಾಜ್ಯ ಸರ್ಕಾರಕ್ಕೆ 6ನೇ ವೇತನ ಆಯೋಗದ ವರದಿ ಸಲ್ಲಿಕೆ
ಬೆಂಗಳೂರು: ಆರನೇ ವೇತನ ಆಯೋಗದ ಶಿಫಾರಸುಗಳ ವರದಿಯನ್ನು ನಿವೃತ್ತ ಅಧಿಕಾರಿ ಎಮ್.ಆರ್. ಶ್ರೀನಿವಾಸ್ ಮೂರ್ತಿ ನೇತೃತ್ವದ ಸಮಿತಿ ಬುಧವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಲ್ಲಿಕೆ ಮಾಡಿದ್ದು, ಈ ಬಾರಿ ಸರ್ಕಾರಿ ನೌಕರರಿಗೆ ಕನಿಷ್ಠ ಶೇ.30ರಷ್ಟು ವೇತನ ಹೆಚ್ಚಳಕ್ಕೆ ಶಿಫಾರಸ್ಸು ಮಾಡಲಾಗಿದೆ ಎಂದು ತಿಳಿದುಬಂದಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬೆಂಗಳೂರಿನ ಗೃಹ ಕಚೇರಿ ಕೃಷ್ಣಾಗೆ ಆಗಮಿಸಿದ ಎಮ್.ಆರ್. ಶ್ರೀನಿವಾಸ್ ಮೂರ್ತಿ ನೇತೃತ್ವದ ಸಮಿತಿ ಸದಸ್ಯರು ತಾವು ಸಿದ್ಧಪಡಿಸಿರುವ ಆರನೇ ವೇತನ ಆಯೋಗದ ಶಿಫಾರಸುಗಳ ವರದಿಯನ್ನು ಸಲ್ಲಿಕೆ ಮಾಡಿದರು. ಸರ್ಕಾರಿ ನೌಕರರ ವೇತನವನ್ನು 2017ರ ಜುಲೈ ಒಂದರಿಂದ ಪೂರ್ವಾನ್ವಯವಾಗುವಂತೆ ಶೇ 30ರಷ್ಟು ಹೆಚ್ಚಿಸಲು ಆರನೇ ವೇತನ ಆಯೋಗ ಶಿಫಾರಸು ಮಾಡಿದ್ದು, ಇದರಿಂದ ಒಟ್ಟು 5.20 ಲಕ್ಷ ನೌಕರರಿಗೆ ಪ್ರಯೋಜನವಾಗಲಿದೆ. ವೇತನ ಹೆಚ್ಚಳ ಶಿಫಾರಸು ರಾಜ್ಯದಲ್ಲಿನ ಅನುದಾನಿತ ಶಿಕ್ಷಣ ಸಂಸ್ಥೆಗಳ, ಸ್ಥಳೀಯ ಸಂಸ್ಥೆಗಳ, ಪದವಿ ಶಿಕ್ಷಣ ವಿದ್ಯಾಲಯ ಹಾಗೂ ವಿಶ್ವವಿದ್ಯಾಲಯಗಳಲ್ಲಿನ ಸುಮಾರು 73,000 ಬೋಧಕೇತರ ಸಿಬ್ಬಂದಿಗಳಿಗೂ ಅನ್ವಯವಾಗಲಿದೆ.
ಕನಿಷ್ಠ ವೇತನ ರೂ. 17,000 ಮತ್ತು ಗರಿಷ್ಠ ವೇತನ ರೂ. 1,50,600 ನಿಗದಿಪಡಿಸುವಂತೆಯೂ ವರದಿಯಲ್ಲಿ ಶಿಫಾರಸು ಮಾಡಲಾಗಿದೆ. ರೂ. 8,500ರ ಕನಿಷ್ಠ ಪಿಂಚಣಿ ಮತ್ತು ರೂ. 75,300ರ ಗರಿಷ್ಠ ಪಿಂಚಣಿಗೂ ಶಿಫಾರಸು ಮಾಡಲಾಗಿದೆ. ಇದರಿಂದಾಗಿ ಈವರೆಗೆ ಡಿಗ್ರೂಪ್ ನೌಕರರಿಗೆ ಇದ್ದ ಆರಂಭಿಕ ಕನಿಷ್ಠ ಮೂಲವೇತನ ರೂ. 9,600 ಇನ್ನು ರೂ. 17,000ಕ್ಕೆ ಏರಿಕೆಯಾಗಲಿದೆ. ಶೇ 45.25ರಷ್ಟಿದ್ದ ತುಟ್ಟಿಭತ್ಯೆ ಮೂಲವೇತನದಲ್ಲಿ ವಿಲೀನವಾಗಲಿದೆ. ಜತೆಗೆ ಶೇ 30ರ ಫಿಟ್ ಮೆಂಟ್ ನೌಕರರಿಗೆ ಸಿಗಲಿದೆ. ಆಯೋಗದ ಶಿಫಾರಸಿನ ಪ್ರಕಾರ, ಪರಿಷ್ಕೃತ ದರವನ್ನು ಈ ವರ್ಷ ಏಪ್ರಿಲ್ 1ರಿಂದಲೇ ಪಾವತಿಸಬೇಕಾಗುತ್ತದೆ. ಇದರಿಂದ ಸರ್ಕಾರದ ಬೊಕ್ಕಸಕ್ಕೆ ಪ್ರತಿ ವರ್ಷ ರೂ. 10,508 ಕೋಟಿ ಹೆಚ್ಚುವರಿ ಹೊರೆಯಾಗಲಿದೆ ಎಂದು ಅಂದಾಜಿಸಲಾಗಿದೆ.
ವರದಿ ಸ್ವೀಕರಿಸಿದ ಬಳಿಕ ಮಾತನಾಡಿದ ಸಿಎಂ ಸಿದ್ದರಾಮಯ್ಯ ಅವರು, ಸರ್ಕಾರಿ ನೌಕರರ ವೇತನ ಪರಿಷ್ಕರಣೆಯ ಬಗ್ಗೆ ಸಲ್ಲಿಸಿದ ವೇತನ ಆಯೋಗದ ಶಿಫಾರಸುಗಳ ಬಗ್ಗೆ ಮುಂದಿನ ವಾರ ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ. 2017ರ ಜೂನ್ ನಲ್ಲಿ ಆರನೇ ವೇತನ ಆಯೋಗವನ್ನು ರಚಿಸಲಾಗಿತ್ತು.
1. ಹಾಲಿ ಸರ್ಕಾರಿ ನೌಕರರ ನಿವೃತ್ತಿ ವಯಸ್ಸನ್ನೂ 60 ವರ್ಷಗಳಿಗೆ ಮುಂದುವರಿಸಬೇಕು
2. ಸ್ವಯಂ ನಿವೃತ್ತಿಗೆ ಕನಿಷ್ಠ ಸೇವಾ ಅರ್ಹತೆ ಮಿತಿ 15ರಿಂದ 10 ವರ್ಷಕ್ಕೆ ಇಳಿಕೆ
3. ಪೂರ್ಣ ಪ್ರಮಾಣದ ಪಿಂಚಿಣಿ ಪಡೆಯಲು ಇರುವ ವಯಸ್ಸಿನ ಅರ್ಹತೆಯನ್ನು 33 ವರ್ಷಗಳಿಗೆ ಬದಲಾಗಿ 30 ವರ್ಷಗಳಿಗೆ ಇಳಿಕೆ
4. ಮನೆ ಬಾಡಿಗೆ ಭತ್ಯೆಯನ್ನು ಪರಿಷ್ಕೃತ ಮೂಲ ವೇತನ ಆಧರಿಸಿ ಶೇ 24, ಶೇ 16 ಮತ್ತು ಶೇ 8ರಂತೆ ಪರಿಷ್ಕರಿಸಬೇಕು
5. ಪಿಂಚಣಿ ಮತ್ತು ಕುಟುಂಬ ಪಿಂಚಣಿಯನ್ನು ಪ್ರಸಕ್ತ ಮೂಲ ಪಿಂಚಣಿಯ ಶೇ 30ರಷ್ಟು ಹೆಚ್ಚಳ ಮಾಡಬೇಕು
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos