ಸಂತೋಷ್ ಹತ್ಯೆ ಪ್ರಕರಣ ತನ್ಖೆಯನ್ನು ಎನ್ಐಎಗೆ ವಹಿಸಿ: ಮಾಜಿ ಡಿಸಿಎಂ ಆರ್. ಅಶೋಕ್ ಆಗ್ರಹ
ಬೆಂಗಳೂರು: ಬೆಂಗಳೂರಿನಲ್ಲಿ ಹತ್ಯೆಯಾದ ಬಿಜೆಪಿ ಕಾರ್ಯಕರ್ತ ಸಂತೋಷ್ ಕೊಲೆ ಪ್ರಕರಣವನ್ನು ಎನ್ಐಎ ತನಿಖೆಗೆ ಒಪ್ಪಿಸಬೇಕೆಂದು ಮಾಜಿ ಉಪ ಮುಖ್ಯಮಂತ್ರಿ ಆರ್. ಅಶೋಕ್ ಆಗ್ರಹಿಸಿದ್ದಾರೆ.
ಮೃತ ಸಂತೋಷ್ ನಿವಾಸಕ್ಕೆ ಭೇಟಿ ನೀಡಿದ್ದ ಅಶೋಕ್ "ರಾಜ್ಯದಲ್ಲಿ ಬಿಜೆಪಿ ಕಾರ್ಯಕರ್ತರಿಗೆ ರಕ್ಷಣೆ ಇಲ್ಲವಾಗಿದ್ದು ಈ ಹತ್ಯಯ ಹಿಂಡೆ ಸ್‌ಡಿಪಿಐ ಮತ್ತು ಕೆಎಫ್‌ಡಿ ಕೈವಾಡ ಇದೆ. ಪ್ರಕರಣದ ತನಿಖೆಗೆ ಮುನ್ನವೇ ಇದು ಹಳೆ ದ್ವೇಷದಿಂಡ ಹತ್ಯೆ ನಡೆದಿದೆ ಎನ್ನುವ ರಾಜ್ಯ ಸರ್ಕಾರದ ಹೇಳಿಕೆ ಖಂಡನಾರ್ಹವಾದದ್ದು. " ಎಂದು ಹೇಳಿದ್ದಾರೆ.
"ಕೊಲೆ ಆರೋಪಿಯು ಗಾಂಜಾ ದಂಧೆಯಲ್ಲಿ ತೊಡಗಿಕೊಂಡಿರುವುದು ಖಚಿತವಾಗಿದ್ದು ಅಲ್ಪಸಂಖ್ಯಾತರ ಪ್ರಕರಣಗಳನ್ನು ವಾಪಾಸ್ ತೆಗೆದುಕೊಳ್ಳುವ ನಿರ್ಧಾರದಿಂದ ರಾಜ್ಯದಲ್ಲಿ ಹಿಂದೂಗಳ ಕೊಲೆ ಅವ್ಯಾಹತವಾಗಿ ನಡೆಯುತ್ತಿದೆ. ಕಮಿಷನರ್ ಮತ್ತು ಗೃಹ ಸಚಿವರು ಸ್ಥಳಕ್ಕೆ ಭೇಟಿ ನೀಡುವವರೆಗೂ ಸಂತೋಷ್ ಅಂತ್ಯ ಸಂಸ್ಕಾರಕ್ಕೆ ಆಸ್ಪದ ನೀಡಲಾಗುವುದಿಲ್ಲ " ಎಂದು ಅಶೋಕ್ ಹೇಳಿದ್ದಾರೆ.
ಬಿಜೆಪಿ ಕಾರ್ಯಕರ್ತ ಸಂತೋಷ್ ಬಂಟಿಂಗ್ಸ್ ಜಗಳಕ್ಕೆ ಬಲಿಯಾಗಿದ್ದಾರೆ ಎಂದು ಸಂಸದ ಪ್ರತಾಪ್ ಸಿಂಹ ಟ್ವೀಟ್ ಮಾಡಿದ್ದಾರೆ.
'ಕೊಲೆ ಸಂಖ್ಯೆ 23. ಫೆಬ್ರವರಿ 4 ರಂದು ಬೆಂಗಳೂರಿಗೆ ಪ್ರಧಾನಿ ನರೇಂದ್ರ ಮೋದಿ ಆಗಮಿಸಲಿದ್ದಾರೆ. ಈ ಸಂಬಂಧ ಸಂತೋಷ್ ತಮ್ಮ ಏರಿಯಾದಲ್ಲಿ ಬಂಟಿಂಗ್ಸ್ ಹಾಕುವಲ್ಲಿ ನಿರತರಾಗಿದ್ದರು, ಈ ವಿಚಾರವಾಗಿ ವಸೀಮ್ ಹಾಗೂ ಸಂತೋಷ್ ನಡುವೆ ಗಲಾಟೆ ನಡೆದಿತ್ತು. ಆದರೆ ಇದೇ ದ್ವೇಷದಿಂದ ಕೊಲೆ ಮಾಡಲಾಗಿದೆ ' ಪ್ರತಾಪ್ ಸಿಂಹ ಟ್ವೀಟ್ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಿನ್ನೆ ರಾತ್ರಿ ಬೆಂಗಳೂರಿನ ನಂದಿದುರ್ಗಾ ರಸ್ತೆಯ ಚಿನ್ನಪ್ಪ ಗಾರ್ಡನ್‌ನಲ್ಲಿ ಬಿಜೆಪಿ ಕಾರ್ಯಕರ್ತ ಸಂತೋಷ್ ಹತ್ಯೆ ನಡೆದಿದ್ದು ರಾಮಸ್ವಾಮಿ ಪಾಳ್ಯ ವಾರ್ಡ್ ಅಧ್ಯಕ್ಷ ಖಾದರ್ ಮಗ ವಾಸೀಂ ಹಾಗೂ ಆತನ ಸ್ನೇಹಿತ ಪಿಲಿಪ್ಸ್ ಇಬ್ಬರನ್ನು ಕೊಲೆ ಆರೋಪದ ಮೇಲೆ ಬಂಧಿಸಲಾಗಿದೆ. ದುಷ್ಕರ್ಮಿಗಳು ಸಂತೋಷ್ ಅವರ ಕತ್ತಿನ ಭಾಗಕ್ಕೆ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾರೆ.