ರಾಜ್ಯ

ಸಮ್ಮಿಶ್ರ ಸರ್ಕಾರಕ್ಕೆ ಸವಾಲಾಗಿರುವ ರೈತರ ಸಾಲಮನ್ನಾ; ಇತರ ಯೋಜನೆಗಳ ವೆಚ್ಚದಲ್ಲಿ ಕಡಿತ

Sumana Upadhyaya

ಬೆಂಗಳೂರು: ರಾಜ್ಯ ಸಮ್ಮಿಶ್ರ ಸರ್ಕಾರದ ಮಹತ್ವಾಕಾಂಕ್ಷಿ ರೈತರ ಸಾಲಮನ್ನಾ ಕಾರ್ಯಸಾಧ್ಯವಿಲ್ಲ ಎಂದು ಆರ್ಥಿಕ ತಜ್ಞರು ಹೇಳಿದರೂ ಕೂಡ ರಾಜ್ಯದ ಆರ್ಥಿಕ ಪರಿಸ್ಥಿತಿಗೆ ಧಕ್ಕೆಯಾಗದಂತೆ ಸಾಲಮನ್ನಾ ಮಾಡಲಾಗುವುದು ಎಂಬ ವಿಶ್ವಾಸದಲ್ಲಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಇದ್ದಾರೆ.

ಅವರ ಅಂದಾಜಿನ ಪ್ರಕಾರ ಕೇವಲ ರೈತರ ಸಾಲಮನ್ನಾದಿಂದ ರಾಜ್ಯ ಸರ್ಕಾರದ ಬೊಕ್ಕಸಕ್ಕೆ 30 ಸಾವಿರ ಕೋಟಿ ರೂಪಾಯಿಗೂ ಅಧಿಕ ಖರ್ಚಾಗಲಿದೆಯಂತೆ.

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸಮ್ಮಿಶ್ರ ಸರ್ಕಾರದ ಸಮನ್ವಯ ಸಮಿತಿ ರೈತರ ಸಾಲಮನ್ನಾ ಪ್ರಸ್ತಾಪಕ್ಕೆ ಒಪ್ಪಿಗೆ ನೀಡಿದೆ. ರಾಜ್ಯದ ಬೊಕ್ಕಸಕ್ಕೆ ಹೊರೆಯಾದರೂ ಕೂಡ ಯೋಜನೆಯ ಸಾಕಾರಕ್ಕೆ ಕೆಲವು ಹಣವನ್ನು ಸಂಗ್ರಹಿಸಲು ಕ್ರಮ ಕೈಗೊಳ್ಳಲು ಸರ್ಕಾರ ನಿರ್ಧರಿಸಿದೆ. ರಾಜ್ಯ ಸರ್ಕಾರದ ಬೊಕ್ಕಸಕ್ಕೆ ಇದರಿಂದ ಹೆಚ್ಚುವರಿ ಹೊರೆಯಾಗುತ್ತದೆ, ಆದರೂ ಕೂಡ ಸಾಲಮನ್ನಾ ನಿರ್ಧಾರದಿಂದ ಹಿಂದೆ ಸರಿಯುವುದಿಲ್ಲ ಎಂದು ಮುಖ್ಯಮಂತ್ರಿಗಳ ಸಲಹಾ ಮಂಡಳಿಯಲ್ಲಿರುವ ಮೂಲಗಳು ಹೇಳುತ್ತವೆ.

ರೈತರ ಸಾಲಮನ್ನಾವನ್ನು ಯಾವ ರೀತಿ ಯಾವಾಗ ಮಾಡಲಾಗುವುದು, ಸಾಲಮನ್ನಾಗೆ ರೈತರ ಅರ್ಹತೆಗಳೇನು ಇತ್ಯಾದಿಗಳನ್ನು ಮುಖ್ಯಮಂತ್ರಿಗಳು ನಾಡಿದ್ದು ಗುರುವಾರ ಮಂಡಿಸಲಿರುವ ಬಜೆಟ್ ನಲ್ಲಿ ಘೋಷಿಸುವ ಸಾಧ್ಯತೆಯಿದೆ. ಜುಲೈ 1, 2017ರವರೆಗೆ ರೈತರು ಎಲ್ಲಾ ಬ್ಯಾಂಕುಗಳಿಂದ ತೆಗೆದುಕೊಂಡ ಬೆಳೆ ಸಾಲಗಳನ್ನು ಮನ್ನಾ ಮಾಡುವ ಸಾಧ್ಯತೆಯಿದೆ. ವಾಸ್ತವವಾಗಿ ಮೇ 2018ರವರೆಗಿನ ಸಾಲಮನ್ನಾ ಮಾಡುವಂತೆ ಸರ್ಕಾರದ ಮೇಲೆ ಒತ್ತಾಯ ಕೇಳಿಬರುತ್ತಿದೆ. ಎಲ್ಲಾ ಬೆಳೆ ಸಾಲಗಳನ್ನು ಮನ್ನಾ ಮಾಡಲು ಸಾಧ್ಯವಿಲ್ಲ. ಷರತ್ತುಗಳಿಗೆ ಬದ್ಧವಾಗಿರುವವರ ರೈತರ ಸಾಲ ಮನ್ನಾ ಮಾಡಲಾಗುತ್ತದೆ ಎಂದು ಮುಖ್ಯಮಂತ್ರಿ ಕಚೇರಿಯ ಮೂಲಗಳು ಹೇಳುತ್ತವೆ.

ಸರ್ಕಾರ ರೈತರ ಸಾಲವನ್ನು ಕಣ್ಣುಮುಚ್ಚಿ ಮನ್ನಾ ಮಾಡುವುದಿಲ್ಲ,ವಿವಿಧ ಇಲಾಖೆಗಳಲ್ಲಿ ಬಳಕೆಯಾಗದಿರುವ ಹಣವನ್ನು ಮುಂದಿನ ವರ್ಷಕ್ಕೆ ಬೇರೆ ಕಾರ್ಯಗಳಿಗೆ ಬಳಸಲಾಗುತ್ತದೆ. ದುಬಾರಿ ಮತ್ತು ಅಷ್ಟು ಜನಪ್ರಿಯವಲ್ಲದ ಸರ್ಕಾರದ ಯೋಜನೆಗಳಿಗೆ ನೀಡುವ ನಿಧಿಯಲ್ಲಿ ಕಡಿತ ಮಾಡಲಾಗುತ್ತದೆ. ಅಂತರ ಇಲಾಖೆ/ ಅಂತರ ಸಚಿವಾಲಯ ಯೋಜನೆಗಳಿಂದ ಸಂಪನ್ಮೂಲಗಳ ಸೋರಿಕೆಯನ್ನು ತಡೆಯುವ ನಿಟ್ಟಿನಲ್ಲಿಯೂ ಸರ್ಕಾರ ಗಮನ ಹರಿಸಲಿದೆ ಎಂದು ಉಪ ಮುಖ್ಯಮಂತ್ರಿ ಡಾ ಜಿ ಪರಮೇಶ್ವರ್ ಅವರ ಆಪ್ತರೊಬ್ಬರು ಹೇಳುತ್ತಾರೆ.

SCROLL FOR NEXT